ಉಡುಪಿ: ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಸಿ ಭಾವುಕಳಾದ ವಿದ್ಯಾರ್ಥಿನಿ ಸಮೀನಾ

Update: 2019-02-18 14:44 GMT

ಉಡುಪಿ, ಫೆ.18: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಸಮಾನ ಮನಸ್ಕ ಸಂಘ ಸಂಸ್ಥೆಗಳು, ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಅಶ್ರುತರ್ಪಣ ಕಾರ್ಯಕ್ರಮದಲ್ಲಿ ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಮೀನಾ ಹುತಾತ್ಮ ಯೋಧರಿಗೆ ನುಡಿನುನ ಸಲ್ಲಿಸುತ್ತ ಭಾವುಕರಾದರು.

ತನ್ನ ಭಾಷಣದಲ್ಲಿ ಸೈನಿಕರ ಕುರಿತು ಕವನ ವಾಚಿಸಿದ ಸಮೀನಾ, ನಾವು ಇಂದು ಸಂತೋಷ ಆಗಿರಲು ಸೈನಿಕರ ತ್ಯಾಗವೇ ಕಾರಣ. ಅವರ ನಿದ್ರೆ ಇಲ್ಲದ ರಾತ್ರಿಯಿಂದಾಗಿ ನಾವು ರಾತ್ರಿ ನೆಮ್ಮದಿಯಲ್ಲಿ ನಿದ್ರೆ ಮಾಡುತ್ತಿದ್ದೇವೆ. ದೇಶಭಕ್ತಿ ಎಂಬುದು ನಮ್ಮ ಹೃದಯದಲ್ಲಿರಬೇಕು ಎಂದು ಹೇಳುತ್ತ ಭಾವುಕರಾದರು.

ಕೆಲ ಕ್ಷಣ ಮಾತು ಹೊರಡದೆ ಮೌನವಾದರು. ಬಳಿಕ ಭಾರತೀಯ ಸೈನ್ಯಕ್ಕೆ ಸೆಲ್ಯುಟ್ ಹೊಡೆದ ಸಮೀನಾ, ನಾನು ಭಾರತೀಯಳು ಎಂಬುದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಭಾಂಗಣದಲ್ಲಿ ನೆರೆದ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿನಿಯರ ಕಣ್ಣುಗಳು ತೇವಗೊಂಡವು. 

ವೇದಿಕೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್, ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಡಿವೈಎಸ್ಪಿ ಜೈಶಂಕರ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News