ಪಡ್ರೆ ಕುಮಾರ - ನಗ್ರಿ ಮಹಾಬಲ ರೈಗೆ ಬೊಂಡಾಲ ಪ್ರಶಸ್ತಿ ಪ್ರದಾನ

Update: 2019-02-18 15:02 GMT

ಮಂಗಳೂರು, ಫೆ.18: ಯಕ್ಷಗಾನವು ಜನರ ಧಾರ್ಮಿಕ ನಂಬಿಕೆಯೊಂದಿಗೆ ಬೆಳೆದು ಬಂದಿದೆ. ಶ್ರೀಕ್ಷೇತ್ರ ಕಟೀಲಿನಂತಹ ಧಾರ್ಮಿಕ ಕೇಂದ್ರಗಳಿಂದ ನಡೆಸಲ್ಪಡುವ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸುವ ಕಲಾವಿದರು ಸಾಕಷ್ಟು ಹೆಸರು, ಕೀರ್ತಿಯೊಂದಿಗೆ ಜೀವನದ ದಾರಿಯನ್ನೂ ಕಂಡುಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಶಂಭೂರು ಗ್ರಾಮದ ಬೊಂಡಾಲದಲ್ಲಿ ಇತ್ತೀಚೆಗೆ ಜರುಗಿದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಹಾಗೂ ಸೇವಾ ಬಯಲಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಮತ್ತು ಆನುವಂಶಿಕ ಆಡಳಿತ ಮೊಕ್ತೇಸರ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು.
ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟರ ಕೊಡುಗೆಯನ್ನು ಸ್ಮರಿಸಿ ಸಂಸ್ಮರಣಾ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದರಾದ ಪಡ್ರೆ ಕುಮಾರ ಮತ್ತು ನಗ್ರಿ ಮಹಾಬಲ ರೈ ಅವರಿಗೆ 2019 ನೇ ಸಾಲಿನ ‘ಬೊಂಡಾಲ ಪ್ರಶಸ್ತಿ’ ಯನ್ನು ಅತಿಥಿಗಳು ಪ್ರದಾನ ಮಾಡಿದರು. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಸನ್ಮಾನ ಪತ್ರ ವಾಚಿಸಿದರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಹಿರಿಯ ಅರ್ಥಧಾರಿ ರಾಯಸ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಬೊಂಡಾಲ ದೇವಿಪ್ರಸಾದ್‌ಶೆಟ್ಟಿ ಮತ್ತು ಸುಪ್ರೀತ್ ಶೆಟ್ಟಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News