ಭಯೋತ್ಪಾದಕ ದಾಳಿಗಳಿಗೆ ಪಾಕ್, ಚೀನಾವನ್ನು ದೂರುವುದನ್ನು ನಿಲ್ಲಿಸಿ: ಚೀನಾ ಪತ್ರಿಕೆ

Update: 2019-02-18 15:06 GMT

ಬೀಜಿಂಗ್, ಫೆ. 18: ಪುಲ್ವಾಮ ದಾಳಿಗೆ ಪಾಕಿಸ್ತಾನವನ್ನು ಯಾವುದೇ ಪುರಾವೆ ಇಲ್ಲದೆ ಹೊಣೆ ಮಾಡುವ ಬದಲು ಹಾಗೂ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಚೀನಾ ತಡೆಯುತ್ತಿದೆ ಎಂದು ಆರೋಪಿಸುವ ಮೊದಲು, ಭಾರತ ತನ್ನ ಭಯೋತ್ಪಾದನೆ ನಿಗ್ರಹ ನೀತಿಯನ್ನು ಮರುಪರಿಶೀಲಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಚೀನಾದ ಸರಕಾರಿ ಮಾಧ್ಯಮ ಹೇಳಿದೆ.

ಅಝರ್ ವಿರುದ್ಧ ‘ಪ್ರಬಲ ಸಾಕ್ಷ್ಯ’ವನ್ನು ನೀಡುವಲ್ಲಿ ಭಾರತ ವಿಫಲವಾಗಿದೆ, ಹಾಗಾಗಿ ಅವನನ್ನು ಭಯೋತ್ಪಾದಕನೆಂದು ಘೋಷಿಸುವ ಪ್ರಕ್ರಿಯೆಯಲ್ಲಿ ಚೀನಾ ಸಹಜವಾಗಿಯೇ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿಕೊಂಡಿದೆ.

ಮಸೂದ್ ಅಝರ್ ವಿಷಯದಲ್ಲಿ ‘ಸದ್ದುಗದ್ದಲವಿಲ್ಲದ ರಾಜತಾಂತ್ರಿಕತೆ’ ನಿಭಾಯಿಸುವುದು ಭಾರತದ ಪಾಲಿಗೆ ಒಳ್ಳೆಯದು ಎಂಬುದಾಗಿ ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ.

‘‘ಪಾಕಿಸ್ತಾನವು ಭಯೋತ್ಪಾದಕ ದಾಳಿಗಳ ಪ್ರಾಯೋಜಕತ್ವ ವಹಿಸುತ್ತಿದೆ ಹಾಗೂ ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂಬುದಾಗಿ ಭಾರತವು ಹಿಂದಿನಿಂದಲೂ ಯಾವುದೇ ಪ್ರಬಲ ಸಾಕ್ಷವಿಲ್ಲದೆ ಆರೋಪಿಸುತ್ತಲೇ ಬಂದಿದೆ’’ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಮುಖವಾಣಿ ‘ಪೀಪಲ್ಸ್ ಡೇಲಿ’ಯ ಸೋದರ ಪ್ರಕಟಣೆ ‘ಗ್ಲೋಬಲ್ ಟೈಮ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News