ಅತಂತ್ರ ಸ್ಥಿತಿಯಲ್ಲಿರುವ ಶ್ರೀನಗರ ನಿವಾಸಿಗಳಿಂದ ರಾಜ್ಯಪಾಲರಿಗೆ ಮನವಿ

Update: 2019-02-18 15:10 GMT

ಜಮ್ಮು, ಫೆ.18: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಶ್ರೀನಗರದಲ್ಲಿ ಕರ್ಫ್ಯೂ ವಿಧಿಸಿರುವ ಮಧ್ಯೆಯೇ ತಮ್ಮನ್ನು ಶ್ರೀನಗರಕ್ಕೆ ಮರಳಿ ಕಳಿಸುವಂತೆ ಜಮ್ಮುವಿನ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿರುವ ನೂರಾರು ಕಾಶ್ಮೀರ ಪ್ರಜೆಗಳು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.

ಜಮ್ಮುವಿನ ಭಟಿಂಡಿಯಲ್ಲಿರುವ ಮಕ್ಕಾ ಮಸೀದಿಯಲ್ಲಿ ಆಶ್ರಯ ಪಡೆದಿದ್ದವರಲ್ಲಿ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸ್ ಬೆಂಗಾವಲಿನೊಂದಿಗೆ ಶನಿವಾರ ಶ್ರೀನಗರಕ್ಕೆ ಕಳುಹಿಸಲಾಗಿದೆ. ಆದರೆ, ಪುಲ್ವಾಮ ಘಟನೆಯ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗಳ ವಿರುದ್ಧ ಆಕ್ರೋಶದ ಭಾವನೆ ನೆಲೆಸಿರುವ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಆಶ್ರಯಕೋರಿ ಮತ್ತಷ್ಟು ಜನ ಬರುತ್ತಿದ್ದಾರೆ. ಜಮ್ಮು -ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕಳೆದೊಂದು ವಾರದಿಂದ ಬಂದ್ ಆಗಿರುವ ಕಾರಣ ಶ್ರೀನಗರದ ಹಲವಾರು ನಿವಾಸಿಗಳು ಜಮ್ಮುವಿನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು 71 ವರ್ಷದ ಬುದ್‌ಗಾಂವ್ ನಿವಾಸಿ ಹಬೀಬುಲ್ಲಾ ಅಳಲು ತೋಡಿಕೊಂಡಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ನಡೆದ ಪಾಕ್ ವಿರೋಧಿ ಪ್ರತಿಭಟನೆಯ ಸಂದರ್ಭ ಜಮ್ಮುವಿನ ಗುಜ್ಜಾರ್ ನಗರ ಹಾಗೂ ಇತರ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದರು. ಜಮ್ಮುವಿನಲ್ಲಿ ಸಿಕ್ಕಿಹಾಕಿಕೊಂಡಿರುವ ಕಾಶ್ಮೀರದ ಯಾತ್ರಿಗಳಿಗೆ ಸ್ಥಳೀಯರು ಹಾಗೂ ಮಸೀದಿ ಸಮಿತಿಯ ವತಿಯಿಂದ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಹಿಂಸಾಚಾರಕ್ಕೆ ಕೆಲವು ಕಿಡಿಗೇಡಿ ಶಕ್ತಿಗಳು ಕಾರಣ. ಸಾಮಾನ್ಯ ಕಾಶ್ಮೀರಿ ಪ್ರಜೆಯೊಬ್ಬನಿಗೆ ತನ್ನ ಕುಟುಂಬ ಸದಸ್ಯರ ಹೊಟ್ಟೆ ತುಂಬಿಸುವುದೇ ದೊಡ್ಡ ಸವಾಲಾಗಿದ್ದು ಇವರು ಹಿಂಸಾಚಾರದಲ್ಲಿ ತೊಡಗಲು ಸಾಧ್ಯವೇ ಎಂದು ಹಬೀಬುಲ್ಲಾ ಹೇಳಿದ್ದಾರೆ.

ಪುಲ್ವಾಮ ದಾಳಿ ಘಟನೆಯ ಬಳಿಕ ದೇಶದ ವಿವಿಧೆಡೆ ನೆಲೆಸಿದ್ದ ಕಾಶ್ಮೀರಿಗಳು ಮಕ್ಕಾ ಮಸೀದಿ ಹಾಗೂ ಭಟಿಂಡಿಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಶಿಬಿರವನ್ನು ಸೇರಿಕೊಳ್ಳುತ್ತಿದ್ದಾರೆ ಎಂದವರು ಹೇಳಿದ್ದಾರೆ. ಕಳೆದ ಶುಕ್ರವಾರ ಗುಜ್ಜಾರ್ ನಗರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಹಿಂದು ಹೋಟೆಲ್ ಮಾಲಕನೋರ್ವ , ತನ್ನ ವಸತಿಗೃಹದಲ್ಲಿ ಬಾಡಿಗೆಗೆ ರೂಂ ಪಡೆದಿದ್ದ 20 ಕಾಶ್ಮೀರಿಗಳ ಮೇಲಿನ ದಾಳಿಯನ್ನು ತಡೆದಿದ್ದರು. ‘ಗೇಟ್’ ಪರೀಕ್ಷೆಗೆಂದು ದಿಲ್ಲಿಗೆ ತೆರಳಿದ್ದಾಗ ಪುಲ್ವಾಮ ದಾಳಿ ಘಟನೆಯ ಬಗ್ಗೆ ತಿಳಿದುಬಂದಿದೆ. ತಕ್ಷಣ ನಾವು ಜಮ್ಮುವಿಗೆ ವಾಪಸಾಗಿ ಬಸ್ಸು ನಿಲ್ದಾಣದ ಬಳಿಯಿರುವ ‘ಹೋಟೆಲ್ ಸ್ಟಾರ್’ನ ಎರಡನೇ ಮಹಡಿಯಲ್ಲಿ ರೂಂ ಪಡೆದಿದ್ದೇವೆ. ಆದರೆ ನಾವು ಈ ಹೋಟೆಲಲ್ಲಿ ರೂಂ ಪಡೆದಿರುವುದನ್ನು ಅರಿತುಕೊಂಡ ಕೆಲವು ಕಿಡಿಗೇಡಿಗಳು ಹೋಟೆಲ್‌ಗೆ ಕಲ್ಲು ತೂರಿ ಕಿಟಕಿ ಗಾಜನ್ನು ಒಡೆದುಹಾಕಿದ್ದಾರೆ. ಆದರೆ ದುಷ್ಕರ್ಮಿಗಳನ್ನು ಎರಡನೇ ಮಹಡಿ ಪ್ರವೇಶಿಸದಂತೆ ಹೋಟೆಲ್ ಮಾಲಕರು ಅಡ್ಡಗಟ್ಟಿದ್ದು ಆಕ್ರೋಶಿತರಾದ ಪ್ರತಿಭಟನಾಕಾರರು ಅವರನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕಾಶ್ಮೀರವನ್ನು ದೇಶದ ಇತರ ಪ್ರದೇಶಗಳಿಗೆ ಸಂಪರ್ಕಿಸುವ ಏಕೈಕ ಸರ್ವ ಋತು ರಸ್ತೆಯಾಗಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಹಿಮಪಾತ ಮತ್ತು ಭೂಕುಸಿತದ ಕಾರಣದಿಂದ ಫೆ.5ರಿಂದ 11ರವರೆಗೆ ಮುಚ್ಚಲಾಗಿತ್ತು. ಹೆದ್ದಾರಿಯ ಇಕ್ಕೆಲಗಳಲ್ಲಿ ಸಿಲುಕಿಕೊಂಡಿದ್ದ ವಾಹನಗಳು ಪ್ರಯಾಣ ಮುಂದುವರಿಸಲು ಅನುಕೂಲವಾಗುವಂತೆ ಫೆ.12ರಂದು ಹೆದ್ದಾರಿಯಲ್ಲಿ ವಾಹನಗಳ ಪ್ರಯಾಣಕ್ಕೆ ಆಂಶಿಕ ವ್ಯವಸ್ಥೆ ಮಾಡಲಾಗಿತ್ತು. ಪುಲ್ವಾಮ ಘಟನೆಯ ಬಳಿಕ ದೇಶದ ವಿವಿಧೆಡೆ ವಿದ್ಯಾರ್ಥಿಗಳ ಸಹಿತ ಕಾಶ್ಮೀರಿಗಳನ್ನು ಗುರಿಯಾಗಿಸಿ ದಾಳಿ ಪ್ರಕರಣ ಹೆಚ್ಚಾದ ಕಾರಣ ಕರ್ಫ್ಯೂ ವಿಧಿಸಲಾಗಿರುವ ಜಮ್ಮುವಿಗೆ ಇವರೆಲ್ಲಾ ಧಾವಿಸಿ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News