ನದಿಯಲ್ಲಿ ಮುಳುಗಿ ಯೋಧ ಮೃತ್ಯು

Update: 2019-02-18 15:16 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಫೆ.18: ಹಸು ಕಳ್ಳಸಾಗಣೆದಾರರನ್ನು ಬೆನ್ನಟ್ಟುತ್ತಿದ್ದಾಗ ಅಕಸ್ಮಾತಾಗಿ ನದಿಗೆ ಜಾರಿಬಿದ್ದ ಬಿಎಸ್ಸೆಫ್ ಯೋಧನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ನಡೆದಿದೆ.

ಹಸುಗಳ ಸಹಿತ ಬಾಂಗ್ಲಾದೇಶದ ಗಡಿ ದಾಟಲು ಯತ್ನಿಸುತ್ತಿದ್ದ ತಂಡವೊಂದನ್ನು ಗಮನಿಸಿದ ಬಿಎಸ್ಸೆಫ್ ಗಸ್ತು ಪಡೆಯವರು ನಿಲ್ಲುವಂತೆ ಸೂಚಿಸಿದ್ದಾರೆ. ಆದರೆ ದೊಣ್ಣೆ ಮತ್ತು ಇತರ ಹರಿತವಾದ ಆಯುಧಗಳಿಂದ ಸಜ್ಜಾಗಿದ್ದ ತಂಡ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದಿದೆ. ಈ ಸಂದರ್ಭ ದೇಬಶಿಶ್ ರಾಯ್ ಎಂಬ ಯೋಧ ಕಳ್ಳಸಾಗಣೆದಾರರನ್ನು ಹಿಡಿಯಲು ಧಾವಿಸಿದ್ದು, ಅವರನ್ನು ಅಟ್ಟಿಸಿಕೊಂಡು ಹೋಗಿ ಅವರ ಹಿಂದೆಯೇ ಪದ್ಮಾ ನದಿಗೆ ಹಾರಿದ್ದಾರೆ. ಆದರೆ ಕೆಸರಲ್ಲಿ ಸಿಲುಕಿಕೊಂಡು ಮುಳುಗಿದ ಅವರು ದಡಕ್ಕೆ ಬರುವ ವಿಫಲ ಪ್ರಯತ್ನದ ಬಳಿಕ ಪ್ರಾಣಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 11 ಭಾರತೀಯರು ಹಾಗೂ ಓರ್ವ ಬಾಂಗ್ಲಾ ಪ್ರಜೆಯನ್ನು ಬಿಎಸ್ಸೆಫ್ ಗಸ್ತು ತಂಡ ಬಂಧಿಸಿದೆ ಮತ್ತು 74 ಹಸುಗಳನ್ನು ವಶಕ್ಕೆ ಪಡೆದಿದೆ. ಬಂಧಿತರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News