ವಿಶ್ವಸಂಸ್ಥೆಯಲ್ಲಿ ರಾಯಭಾರಿ ಅಭ್ಯರ್ಥಿತ್ವದಿಂದ ಹಿಂದೆ ಸರಿದ ನೋವರ್ಟ್

Update: 2019-02-18 15:16 GMT

ವಾಶಿಂಗ್ಟನ್, ಫೆ. 18: ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಹುದ್ದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಭ್ಯರ್ಥಿಯಾಗಿದ್ದ ಹೆದರ್ ನೋವರ್ಟ್ ತನ್ನ ಅಭ್ಯರ್ಥಿತ್ವದಿಂದ ಹಿಂದೆ ಸರಿದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹೇಲಿಯ ಸ್ಥಾನಕ್ಕೆ ನಾಮನಿರ್ದೇಶನಗೊಂಡ ವಾರಗಳ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಮೆರಿಕದ ವಿದೇಶಾಂಗ ಇಲಾಖೆಯು ಹೇಳಿಕೆಯೊಂದನ್ನು ನೀಡಿ, ಹೆದರ್ ನೋವರ್ಟ್ ಅಭ್ಯರ್ಥಿತ್ವದಿಂದ ಹಿಂದೆ ಸರಿದಿರುವುದನ್ನು ಪ್ರಕಟಿಸಿತು. ಅವರ ಸ್ಥಾನಕ್ಕೆ ಇನ್ನೊಬ್ಬರನ್ನು ಅಧ್ಯಕ್ಷರು ಶೀಘ್ರದಲ್ಲೇ ನೇಮಿಸುತ್ತಾರೆ ಎಂದು ಅದು ತಿಳಿಸಿದೆ.

‘‘ನನ್ನನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಹುದ್ದೆಗೆ ಪರಿಗಣಿಸಿರುವುದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ, ಕಳೆದ ಎರಡು ತಿಂಗಳು ನನ್ನ ಕುಟುಂಬಕ್ಕೆ ಅತ್ಯಂತ ಕಠಿಣವಾಗಿತ್ತು. ಹಾಗಾಗಿ, ನನ್ನ ಕುಟುಂಬ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಅಭ್ಯರ್ಥಿತ್ವದಿಂದ ಹಿಂದೆ ಸರಿಯುತ್ತಿದ್ದೇನೆ’’ ಎಂಬುದಾಗಿ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ನೋವರ್ಟ್ ಹೇಳಿದ್ದಾರೆ.

ಅವರು ವಿದೇಶಾಂಗ ಇಲಾಖೆಯ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News