ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ ಮೈತ್ರಿ ಘೋಷಿಸಿದ ಬಿಜೆಪಿ-ಶಿವಸೇನೆ
ಹೊಸದಿಲ್ಲಿ, ಫೆ.18: ನಿರಂತರ ಪರಸ್ಪರ ಟೀಕೆಗಳ ಹೊರತಾಗಿಯೂ ಮುಂದಿನ ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಮತ್ತು ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
“ಶಿವಸೇನೆ ಮತ್ತು ಅಕಾಲಿದಳ ಹಳೆಯ ಮಿತ್ರಪಕ್ಷಗಳಾಗಿವೆ. ನಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಅವೆಲ್ಲವೂ ಇತಿಹಾಸ. ಮಹಾರಾಷ್ಟ್ರದಲ್ಲಿ ನಮ್ಮ ಮೈತ್ರಿ ಕನಿಷ್ಠ 45 ಸೀಟುಗಳನ್ನು ಗೆಲ್ಲಲಿದೆ” ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
“ಜನರು ಕಳೆದ 30 ವರ್ಷಗಳಿಂದ ಶಿವಸೇನೆ ಮತ್ತು ಬಿಜೆಪಿಯನ್ನು ನೋಡುತ್ತಿದ್ದಾರೆ. 25 ವರ್ಷಗಳಿಂದ ನಾವು ಒಗ್ಗಟ್ಟಾಗಿಯೇ ಇದ್ದೆವು. 5 ವರ್ಷಗಳಲ್ಲಿ ಭಿನ್ನಾಭಿಪ್ರಾಯಗಳಿತ್ತು. ಆದರೆ ಫಡ್ನವೀಸ್ ಹೇಳಿದಂತೆ ಸಮಯಕ್ಕೆ ಸರಿಯಾಗಿ ನಾನು ಸರಕಾರಕ್ಕೆ ಮಾರ್ಗದರ್ಶನ ನೀಡುತ್ತಿದ್ದೆ” ಎಂದು ಉದ್ಧವ್ ಠಾಕ್ರೆ ಹೇಳಿದರು.
2014ರಲ್ಲಿ ಶಿವಸೇನೆ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.