ಬದಲಾವಣೆಗೆ ಹೊಂದಿಕೊಂಡು ಮುಂದುವರಿಯಿರಿ: ಪ್ರೊ.ಹೆಬ್ಬಾರ್

Update: 2019-02-18 15:39 GMT

ಬ್ರಹ್ಮಾವರ, ಫೆ.18: ಕ್ಷಣಕಾಲದ ದುಡುಕುತನದಿಂದ ವಿದ್ಯಾರ್ಥಿಗಳು ಇಂದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಮೊಬೈಲ್, ಫೇಸ್‌ಬುಕ್‌ನಂತಹ ಆಧುನಿಕ ಉಪಕರಣಗಳಿಗೆ ಅತಿಯಾಗಿ ಮಾರು ಹೋಗದೇ ತಾಳ್ಮೆ, ಸಹನೆ, ವಿವೇಕ, ಬುದ್ಧಿಮತ್ತೆಯಿಂದ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಬ್ರಹ್ಮಾವರ ಚಾಂತಾರಿನ ಕ್ರಾಸ್‌ಲ್ಯಾಂಡ್ ಕಾಲೇಜಿನ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ರ್ಯಾಂಕ್ ವಿಜೇತರನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.

ಗುರು ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಇಂದಿನ ಯುವಜನತೆ ಯಲ್ಲಿ ನಾವು ಕಾಣದಂತಾಗಿದೆ. ಕೀಳರಿಮೆ, ಮನಃಶಾಂತಿಯನ್ನು ಕಳೆದು ಕೊಳ್ಳುತ್ತಿರುವ ನಮ್ಮ ಯುವಜನಾಂಗಕ್ಕೆ ಧೈರ್ಯ ತುಂಬಬೇಕಾಗಿದೆ ಎಂದರು.

ಕಾಲೇಜಿನ ಸಂಚಾಲಕ ಡಾ.ರಾಯ್ ಫಿಲಿಪ್, ಪದವಿ ಪೂರ್ವ ವಿಭಾಗದ ಸಂಚಾಲಕ ವರ್ಗಿಸ್ ಡೇನಿಯಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ. ಸ್ಯಾಮುಯೆಲ್ ವರದಿ ವಾಚಿಸಿದರು. ಉಪ ಪ್ರಾಂಶುಪಾಲರಾದ ಪ್ರೊ.ಎಲಿಜೆಬೆತ್ ರಾಯ್ ಮತ್ತು ಶೇಷಗಿರಿ ಭಟ್ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಡಾ.ರಾಬರ್ಟ್ ಕ್ಲೈವ್ ರ್ಯಾಂಕ್ ವಿಜೇತರನ್ನು ಪರಿಚಯಿಸಿದರು.

ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಮಂಗಳೂರು ವಿವಿಯ ಬಿ.ಎ ವಿಭಾಗ ದಲ್ಲಿ ಪ್ರಥಮ ರ್ಯಾಂಕ್ ಪಡೆದ ಹಂಸವೇಣಿ ಹಾಗೂ ನಾಲ್ಕನೇ ರ್ಯಾಂಕ್ ಪಡೆದ ಅರವಿಂದ್ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದ ಕಾಲೇಜಿನ ವಿದ್ಯಾರ್ಥಿ ಪ್ರದ್ಯುಮನ್ ಹೊಳ್ಳರನ್ನು ಗೌರವಿಸಲಾಯಿತು.

ವಿದ್ಯಾರ್ಥಿ ನಾಯಕ ಸಂದೀಪ ಸ್ವಾಗತಿಸಿ, ನಿತಿನ್ ಶೆಟ್ಟಿ ವಂದಿಸಿದರು. ಜತೆ ಕಾರ್ಯದರ್ಶಿ ಸೌಮ್ಯ ಮರ್ಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News