×
Ad

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 4 ಸತ್ತ ಮಂಗಗಳು ಪತ್ತೆ

Update: 2019-02-18 22:29 IST

ಉಡುಪಿ, ಫೆ.18: ಸೋಮವಾರ ಉಡುಪಿ ಜಿಲ್ಲೆಯಲ್ಲಿ ಇನ್ನೂ ನಾಲ್ಕು ಸತ್ತ ಮಂಗಗಳು ಪತ್ತೆಯಾಗಿವೆ. ಕಾರ್ಕಳ ತಾಲೂಕಿನ ದುರ್ಗಾದ ತೆಳ್ಳಾರು, ಉಡುಪಿ ತಾಲೂಕಿನ ಆವರ್ಸೆಯ ವಂಡಾರು, ಕುಂದಾಪುರ ತಾಲೂಕಿನ ಕಂಡ್ಲೂರಿನ ಕಾವ್ರಾಡಿ ಹಾಗೂ ಹಳ್ಳಿಹೊಳೆಯ ಕಮಲಶಿಲೆಗಳಲ್ಲಿ ಈ ಸತ್ತ ಮಂಗಗಳ ಕಳೇಬರ ಪತ್ತೆಯಾಗಿವೆ.

ಇವುಗಳಲ್ಲಿ ದುರ್ಗಾದ ತೆಳ್ಳಾರಿನಲ್ಲಿ ಪತ್ತೆಯಾದ ಮಂಗನ ಅಟಾಪ್ಸಿ ನಡೆಸಲಾಗಿದೆ. ಈವರೆಗೆ 56 ಮಂಗಗಳ ಅಟಾಪ್ಸಿಯ ವರದಿ ಬಂದಿದ್ದು, ಜ.19ರ ನಂತರ ನಡೆಸಲಾದ 44 ಮಂಗಗಳ ಅಟಾಪ್ಸಿಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.

ಇಂದು ಒಬ್ಬರ ರಕ್ತವನ್ನು ಶಂಕಿತ ಮಂಗನಕಾಯಿಲೆ ಸೋಂಕಿಗಾಗಿ ಪರೀಕ್ಷೆಗೊಳಪಡಿಸಲಾಗಿದೆ. ಅದರ ವರದಿ ಇನ್ನಷ್ಟೇ ಬರಬೇಕಿದೆ. ಉಳಿದಂತೆ ಈವರೆಗೆ ನಡೆಸಲಾದ ಎಲ್ಲಾ 40 ಮಂದಿಯ ರಕ್ತ ಪರೀಕ್ಷೆ ವರದಿ ನೆಗಟೀವ್ ಆಗಿದೆ ಎಂದು ಡಾ.ಭಟ್ ತಿಳಿಸಿದರು.

ಮಂಗನಲ್ಲಿ ಕೆಎಫ್‌ಡಿ ವೈರಸ್ ಸೋಂಕು ಪತ್ತೆಯಾದ ಗ್ರಾಮಗಳ ವ್ಯಾಪ್ತಿಯಲ್ಲಿ ಜ್ವರದ ಸರ್ವೆ ನಡೆಯುತಿದ್ದು, ಇಂದು 3892 ಮನೆಗಳ ಸರ್ವೆ ನಡೆಸಲಾಗಿದೆ. ಜ.9ರಿಂದ ಈವರೆಗೆ ಒಟ್ಟು 88,680 ಮನೆಗಳ ಸರ್ವೆ ಮುಗಿಸಲಾಗಿದೆ ಎಂದು ಅವರು ವಿವರಿಸಿದರು.

ಮಣಿಪಾಲದಲ್ಲಿ 25ಮಂದಿಗೆ ಚಿಕಿತ್ಸೆ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 199 ಮಂದಿ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಹಾಗೂ ಜ್ವರ ಮರುಕಳಿಸಿದ್ದರಿಂದ 9 ಮಂದಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇವರಲ್ಲಿ ಸುಮಾರು 76 ಜನರಿಗೆ ಮಂಗನ ಕಾಯಿಲೆ ಇರುವುದು ಪರೀಕ್ಷೆಗಳಿಂದ ಖಚಿತವಾಗಿದೆ. ಉಳಿದಂತೆ 132 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ.

ಚಿಕಿತ್ಸೆಗಾಗಿ ದಾಖಲಾದವರಲ್ಲಿ 179 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 25 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯು ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೂವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News