ಮಣಿಪಾಲ: ಮಾರ್ಕ್‌ಗೆ ಮೂರು ದಶಕದ ಸಂಭ್ರಮಾಚರಣೆ

Update: 2019-02-18 17:03 GMT

ಮಣಿಪಾಲ, ಫೆ.18: ಮಣಿಪಾಲ ಸಹಾಯಿತ ಪ್ರಜನನ ಕೇಂದ್ರ (ಮಾರ್ಕ್)ದಿಂದ 5000 ಶಿಶುಗಳ ಜನ್ಮ ಹಾಗೂ ಯಶಸ್ವೀ 30ನೇ ವರ್ಷ ಸೇವೆಯ ಸಂಭ್ರಮಾಚರಣೆಯನ್ನು ಇತ್ತೀಚೆಗೆ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾಹೆಯ ಸಹ ಉಪಕುಲಪತಿ ಡಾ.ಪಿಎಲ್‌ಎನ್‌ಜಿ ರಾವ್ ಭಾಗವಹಿಸಿ ಮಾತನಾಡಿ, ಈ ಸಮಾಜ ಮತ್ತು ಮಾನವಕುಲದ ಲಾಭಕ್ಕಾಗಿ ಈ ಕೇಂದ್ರವು ಹಲವು ವರ್ಷಗಳಿಂದ ಕೆಲಸ ಮಾಡಿದೆ ಎಂದರು. ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್, ಮಾರ್ಕ್‌ನ ಸಾಮಾಜಿಕ ಮಾಧ್ಯಮ, ವೆಬ್ ಸಂಪರ್ಕ ಮತ್ತು ಇ-ಸಮಾಲೋಚನೆ ಸೌಲಭ್ಯಗಳನ್ನು ಉದ್ಘಾಟಿಸಿದರು.

ಕೇಂದ್ರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಪ್ರತಾಪ್ ಕುಮಾರ್, 1990ರಿಂದ ಈ ಕೇಂದ್ರ ನಡೆದು ಬಂದ ದಾರಿಯನ್ನು ಅವಲೋಕಿಸಿದರು. ಬಂಜೆತನ ನಿವಾರಣೆಯಲ್ಲಿ ಕೇಂದ್ರ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದೆ. ಮೊದಲಿಗೆ ಮಾರ್ಕ್ ಸರಳ ವಿಧಾನಗಳೊಂದಿಗೆ ಪ್ರಾರಂಭವಾಗಿ ನಂತರ 1998ರಲ್ಲಿ ಪ್ರನಾಳ ಶಿಶು ( ಟೆಸ್ಟ್‌ಟ್ಯೂಬ್ ಬೇಬಿ-ಐವಿಎಫ್) ವಿಧಾನವನ್ನು ಪ್ರಾರಂಭಿಸಿದ ಕುರಿತು ವಿವರಿಸಿದರು.

ಕೇಂದ್ರದ ಮೊದಲ ಪ್ರನಾಳ ಶಿಶು 1999ರ ಫೆ.18ರಂದು ಜನಿಸಿದ್ದು, ದಂಪತಿಗಳಿಗೆ ಮಾರ್ಕ್ ವ್ಯಾಪಕವಾದ ಚಿಕಿತ್ಸಾ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಈ ಕೇಂದ್ರ ತಜ್ಞ ವೈದ್ಯರು ಮತ್ತು ವಿಜ್ಞಾನಿಗಳ ಅನುಭವದಿಂದ ಬೆಂಬಲಿತವಾಗಿದೆ ಹಾಗೂ ಅವರು ವಿದೇಶದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಪ್ರವರ್ತಕ ತಾಂತ್ರಿಕ ಸುಧಾರಣೆಗಳು ಭಾರತದಲ್ಲಿ ಬಂಜೆತನದ ಚಿಕಿತ್ಸೆಗಾಗಿ ಮಾರ್ಕ್ ಅನ್ನು ಅತ್ಯಂತ ಸುಧಾರಿತ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿದೆ ಎಂದು ಡಾ. ಪ್ರತಾಪ್‌ ಕುಮಾರ್ ತಿಳಿಸಿದರು.

ಕೆಎಂಸಿ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ ವಿ ಪೈ ಮಾರ್ಕಿನ 30ನೇ ವರ್ಷಕ್ಕೆ ಶುಭ ಹಾರೈಸಿದರಲ್ಲದೇ ಸಮಾಜಕ್ಕೆ ಮಾರ್ಕಿನ ಕೊಡುಗೆಯನ್ನು ಶ್ಲಾಘಿಸಿದರು.

ಮಾರ್ಕಿನ ಪ್ರಾಧ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ಡಾ. ಸತೀಶ ಅಡಿಗ ವಂದಿಸಿದರು. ಸುಮಾರು 300 ಮಕ್ಕಳು ಈ ಸಂದರ್ಭದಲ್ಲಿ ಬಂದಿದ್ದರು. ಮಣಿಪಾಲದಲ್ಲಿ ಜನಿಸಿದ ಮೊದಲ ಐವಿಎಫ್ ಮಗುವಿಗೆ ಈಗ 20 ವರ್ಷ ತುಂಬಿದ್ದು, ಕೆಎಂಸಿ ಮಂಗಳೂರಿನಲ್ಲಿ ವೈದ್ಯಕೀಯ ಕಲಿಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News