ಆದೇಶ ಪಾಲಿಸದ ಎಂಆರ್‌ಪಿಎಲ್: ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ

Update: 2019-02-18 17:23 GMT

ಮಂಗಳೂರು, ಫೆ.18: ಎಂಆರ್‌ಪಿಲ್‌ಗೆ ಸರಕಾರವು ಆರು ಅಂಶಗಳ ಪರಿಹಾರ ಕ್ರಮ ಘೋಷಿಸಿ, ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ನೀಡಿದ್ದ ಆದೇಶದ ಅವಧಿ ದಾಟಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜೋಕಟ್ಟೆಯಲ್ಲಿ ಎಂಆರ್‌ಪಿಎಲ್ ಆರಂಭಿಸಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಸ್ಥಳೀಯರು ಪ್ರತಿಭಟನೆ ಮೂಲಕ ಅಡ್ಡಿಪಡಿಸಿದ ಘಟನೆ ನಡೆದಿದೆ.

ಎಂಆರ್‌ಪಿಎಲ್ ಕೋಲ್‌ಸಲ್ಫರ್ ಘಟಕದಿಂದ ಉಂಟಾಗುವ ಗಂಭೀರ ಮಾಲಿನ್ಯದಿಂದ ಕಂಗೆಟ್ಟಿದ್ದ ಜೋಕಟ್ಟೆ, ಕಳವಾರು ಪ್ರದೇಶದ ನಾಗರಿಕರು 2014ರಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಿದ್ದರು. ಹೋರಾಟದ ಪರಿಣಾಮವಾಗಿ 2016ರಲ್ಲಿ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ಘೋಷಿಸಿ, ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಆದೇಶಿಸಿತ್ತು. ಆದರೆ ಎಂಆರ್‌ಪಿಲ್ ಸರಕಾರದ ನಿಗದಿ ಪಡಿಸಿದ ಸಮಯ ದಾಟಿದರೂ ಮಾಲಿನ್ಯ ತಡೆಯಲು ಬೇಕಾದ ಕ್ರಮಗಳನ್ನು ಕೈಗೊಂಡಿರಲಿಲ್ಲ. 27 ಎಕರೆ ಜಾಗದಲ್ಲಿ ಊರು ಹಾಗೂ ಕಂಪೆನಿಯ ನಡುವೆ ಗ್ರೀನ್ ಬೆಲ್ಟ್ ನಿರ್ಮಾಣದ ಪ್ರಕ್ರಿಯೆಯು ಸ್ಥಳೀಯ ಶಾಸಕರ ಕಾರಣಕ್ಕೆ ನನೆಗುದಿಗೆ ಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಆರ್‌ಪಿಎಲ್‌ನಿಂದ ಜೋಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಂತ್ರಸ್ತ ಸ್ಥಳೀಯರು ತೀವ್ರತರದ ಪ್ರತಿಭಟನೆಯ ಮೂಲಕ ಕಾಮಗಾರಿಗೆ ತಡೆ ಒಡ್ಡಿದರು. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ವಾಪಸ್ ತೆರಳಿದರು.

ಪ್ರತಿಭಟನೆಯ ನೇತೃತ್ವವನ್ನು ನಾಗರಿಕ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಅಬೂಬಕರ್ ಬಾವ, ಶೇಖರ ಜೋಕಟ್ಟೆ, ಅಮೀನಮ್ಮ, ಯುಮುನಕ್ಕ, ಸಿಲ್ವಿಯಾ ಡಿಸೋಜ, ಇಕ್ಬಾಲ್ ಜೋಕಟ್ಟೆ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News