ಪುತ್ತೂರು: ಕೆಸ್ಸಾರ್ಟಿಸಿ ಅಧಿಕಾರಿ ವರ್ಗ, ಸಿಬ್ಬಂದಿಗಳಿಂದ ಮನವಿ

Update: 2019-02-18 17:45 GMT

ಪುತ್ತೂರು, ಫೆ. 18: ಕೆಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿಯವರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಲ್ಲಿನ ಮಹಿಳಾ ನಿರ್ವಾಹಕಿ ಶಾಲಿನಿ ಎಂಬವರು ನೀಡಿರುವ ದೂರು ಸುಳ್ಳಾಗಿದ್ದು, ಈ ದೂರನ್ನು ಕೈಬಿಡುವಂತೆ ಕೆಸ್ಸಾರ್ಟಿಸಿ ವಿಭಾಗೀಯ ಕಚೇರಿಯ ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಟಣೆಗಳು ಸೋಮವಾರ ಸಹಾಯಕ ಆಯುಕ್ತರು ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಫೆ.15ರಂದು ಶಾಲಿನಿಯವರಿಗೆ ವಿಭಾಗೀಯ ಕಚೇರಿಯಲ್ಲಿ ವಿಚಾರಣೆಗೆ ಸಂಬಂಧಿಸಿ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ನಿಗದಿಪಡಿಸಿದ ಸಮಯಕ್ಕೆ ಮುಂಚಿತವಾಗಿ 10.20ಕ್ಕೆ ಕಚೇರಿಗೆ ಬಂದಿರುವುದಲ್ಲದೆ ವಿಚಾರಣೆಯಲ್ಲಿ ಹಾಜರಾಗದೆ 10.25ಕ್ಕೆ ಕಚೇರಿಯಿಂದ ನಿರ್ಗಮಿಸಿರುತ್ತಾರೆ. ಈ ಸಮಯದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಕಚೇರಿಯಲ್ಲಿಯೇ ಇದ್ದರೂ ಶಾಲಿನಿಯವರು ನಿಯಂತ್ರಣಾಧಿಕಾರಿ ಯನ್ನು ಭೇಟಿ ಮಾಡದೇ ಅಲ್ಲಿಂದ ನಿರ್ಗಮಿಸಿರುತ್ತಾರೆ. ಹಾಗಿದ್ದರೂ ಶಾಲಿನಿಯವರು ತಮ್ಮ ಮೇಲೆ ದೌರ್ಜನ್ಯ ಎಸಗಿರುವುದಾಗಿ ಸುಳ್ಳು ದೂರು ನೀಡಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಯಾವುದೇ ರೀತಿಯ ದೌರ್ಜನ್ಯ ಎಸಗಿರುವುದಿಲ್ಲ. ಇದಕ್ಕೆ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳೇ ಸಾಕ್ಷಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ  ಕೆಸ್ಸಾರ್ಟಿಸಿ ವಿಭಾಗೀಯ ಅಂಕಿ ಅಂಶ ಅಧಿಕಾರಿ ಜಯಕರ ಶೆಟ್ಟಿ, ಅಂಕಿ ಅಂಶ ಸಹಾಯಕ ಹರೀಶ್ಚಂದ್ರ, ಉಪಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಎಚ್. ದಿವಾಕರ್, ಯಾಂತ್ರಿಕ ಅಭಿಯಂತರ ಆರ್. ವೇಣುಗೋಪಾಲ್, ಸಹಾಯಕ ಲೆಕ್ಕಾಧಿಕಾರಿ ಪ್ರೇಮ, ಸಿಬ್ಬಂದಿ ಮೇಲ್ವಿಚಾರಕ ಮಹಮ್ಮದ್ ಹುಸೈನ್, ಸಿಬ್ಬಂದಿ ಮೇಲ್ವಿಚಾರಕಿ ರಶ್ಮಿ, ಸಿಬ್ಬಂದಿಗಳಾದ ರೂಪಾ. ಶರ್ಮಿಳಾ, ಪದ್ಮಲತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News