ಧರ್ಮಸ್ಥಳ: ಮಂಗಲ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ

Update: 2019-02-18 17:57 GMT

ಬೆಳ್ತಂಗಡಿ, ಫೆ. 18:  ಧರ್ಮಸ್ಥಳ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮಸ್ತಕಾಭಿಷೇಕದ ಮೂರನೆ ದಿನವಾದ ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.

ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಮಸ್ತಕಾಭಿಷೇಕ ನಡೆಯಿತು. ಜಲಾಭಿಷೇಕದ ಬಳಿಕ ಬೆಳ್ತಂಗಡಿಯ ಶ್ರೀನಿವಾಸ ಶೆಟ್ಟಿ ಮತ್ತು ಕುಟುಂಬಸ್ಥರು ಇಕ್ಷುರಸದ ಅಭಿಷೇಕ ನಡೆಸಿದರು. ವೇಣೂರಿನ ಸುನಂದಾದೇವಿ ಇಂದ್ರ ಕ್ಷೀರಾಭಿಷೇಕ ನಡೆಸಿದರು. ಕಳಸದ ಧರಣೇಂದ್ರಯ್ಯ ಕಲ್ಕೋಡು ಕಲ್ಕಚೂರ್ಣ ಅಭಿಷೇಕ ನೆರವೇರಿಸಿದರು. ಬೆಂಗಳೂರಿನ ಶ್ರೇಷ್ಠ ಜೈನ್ ಕಷಾಯ ಅಭಿಷೇಕ ಮಾಡಿದರೆ ಬೆಂಗಳೂರಿನ ಎಂ.ಎಸ್. ಮೃತ್ಯುಂಜಯ ಕೇಸರಿ ಅಭಿಷೇಕ ನೆರವೇರಿಸಿದರು.ಮೂಡಬಿದ್ರೆಯ ರೋಹಿಣಿ ಆದಿರಾಜ್ ಕಷಾಯ ಅಭಿಷೇಕ ಮಾಡಿದರು. ಮಂಗಳೂರಿನ ರತ್ನಾಕರ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಬೆಂಗಳೂರಿನ ಸೋಹನ್ ಲಾಲ್ ಜೈನ್ ಮತ್ತು ಹುಬ್ಬಳ್ಳಿಯ ಪಂಕಜ ಜೈನ್ ಚತುಷ್ಕೋನ ಅಭಿಷೇಕ ಮಾಡಿ ಪುಣ್ಯಭಾಗಿಗಳಾದರು. ಬೆಳ್ತಂಗಡಿಯ ಶಶಿಕಿರಣ ಜೈನ್ ಶ್ರೀಗಂಧದ ಅಭಿಷೇಕ ಮಾಡಿದರೆ, ಮೂಡಬಿದ್ರೆಯ ಸರೋಜ ಗುಣಪಾಲ ಜೈನ್ ಚಂದನದ ಅಭಿಷೇಕ ನೆರವೇರಿಸಿದರು.

ಮಸ್ತಕಾಭಿಷೇಕ ಸಮಾಪನ

 ಸೋಮವಾರ ಸಂಜೆ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಧ್ವಜ ಅವರೋಹಣ, ಕುಂಕುಮೋತ್ಸವ, ಕಂಕಣ ವಿಸರ್ಜನೆ ಮತ್ತು ತೋರಣ ವಿಸರ್ಜನೆಯೊಂದಿಗೆ ಮಸ್ತಕಾಭಿಷೇಕ ಸಮಾಪನಗೊಂಡಿತು.

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News