ಮುಂದಿನ ಪದವಿ ಶಿಕ್ಷಣದಲ್ಲಿ ತುಳು ಐಚ್ಛಿಕ ಭಾಷೆ: ಎ.ಸಿ. ಭಂಡಾರಿ

Update: 2019-02-18 18:00 GMT

ಮಂಗಳೂರು, ಫೆ.18: ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಪದವಿ ಶಿಕ್ಷಣದಲ್ಲಿ ತುಳುವನ್ನು ಐಚ್ಛಿಕ ಭಾಷೆಯಾಗಿ ಕಲಿಯಬಹುದು ಎಂದು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಸಂತ ಅಲೋಶಿಯಸ್ ಕಾಲೇಜು ಜಂಟಿ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೋಮವಾರ ನಡೆದ ತುಳು ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿಯಲ್ಲಿ ತುಳು ಭಾಷೆ ಅಳವಡಿಸುವ ನಿಟ್ಟಿನಲ್ಲಿ ಈಗಾಗಲೇ ಪಠ್ಯಕ್ರಮಗಳ ಕೆಲಸಗಳು ನಡೆಯುತ್ತಿದೆ. ಈ ಬಗ್ಗೆ ಕೆಲ ಸಮಯದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ ಮನವಿ ಮಾಡಲಾಗುವುದು ಎಂದು ಹೇಳಿದರು.

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 417 ಮಂದಿ ತುಳು ಪರೀಕ್ಷೆ ಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಶೇ.90 ರಷ್ಟು ಅಂಕಗಳಿಸಿದ್ದಾರೆ. ಈ ಬಾರಿ 620 ಮಂದಿ ಪರೀಕ್ಷೆ ಬರೆಯಲಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾಷೆ ಬೆಳವಣಿಗೆಯ ಉದ್ದೇಶದಿಂದ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಸುಮಾರು 5,000ದಷ್ಟು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ತುಳು ಭಾಷೆ, ಸಂಸ್ಕೃತಿ ಮತ್ತಷ್ಟು ಪಸರಿಸಲು ಒತ್ತು ನೀಡಲಾಗುವುದು. ಶಾಲಾ-ಕಾಲೇಜುಗಳಿಗೆ ತೆರಳಿ ತುಳು ಭಾಷೆಯ ಸಂಸ್ಕೃತಿಯ ಅರಿವು ಮೂಡಿಸಲಾಗುತ್ತಿದೆ. ಎರಡೂವರೆ ಸಾವಿರ ವರ್ಷ ಇತಿಹಾಸ ಹೊಂದಿರುವ ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಆದರೆ ತುಳುವರ ತಾತ್ಸಾರ ಮನೋಭಾವನೆಯಿಂದ ಈ ಭಾಷೆಯಿಂದು ಹಿಂದುಳಿದಿದೆ ಎಂದು ತಿಳಿಸಿದರು. ಚಲನಚಿತ್ರ ನಟ ಬೋಜರಾಜ ವಾಮಂಜೂರು ಮಾತನಾಡಿದರು. ಇದೇ ವೇಳೆ ಬೋಜರಾಜ ವಾಮಂಜೂರು ಅವರನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆಾ ಪ್ರವೀಣ್ ಮಾರ್ಟಿಸ್ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಬಾಲನಟಿ ಚಿತ್ರಾಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ದುರ್ಗಾ ಮೆನನ್, ತುಳು ಕೂಟದ ಅಧ್ಯಕ್ಷರಾದ ಸುರಕ್ಷ ಕರ್ಕೇರ, ರಶ್ಮಿ ಅಮೀನ್ ಇದ್ದರು. ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಚೈತ್ರಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News