ಸಿಪಿಎಂ ಮುಖಂಡ ಪಿ. ಹರಿಶ್ಚಂದ್ರ ರಾವ್ ನಿಧನ

Update: 2019-02-18 18:11 GMT

ಮಂಗಳೂರು, ಫೆ.18: ಸಿಪಿಎಂ ಹಿತೈಷಿ, ಟೆಲಿಕಾಂ ಇಲಾಖೆಯ ನಿವೃತ್ತ ಅಧಿಕಾರಿ, ದ.ಕ. ಜಿಲ್ಲೆಯ ಹಿರಿಯ ಪ್ರಗತಿಪರ ಚಿಂತಕರಾದ ಪಿ. ಹರಿಶ್ಚಂದ್ರ ರಾವ್ (81) ಅನಾರೋಗ್ಯದಿಂದಾಗಿ ಮಂಗಳೂರಿನ ಅಶೋಕನಗರದಲ್ಲಿರುವ ಸ್ವಗೃಹದಲ್ಲಿ ಸೋಮವಾರ ನಿಧನರಾದರು.

ಕಮ್ಯುನಿಸ್ಟ್ ಚಳವಳಿಯ ಹಿರಿಯ ನೇತಾರ, ಮಾಜಿ ಶಾಸಕ ಪಿ.ರಾಮಚಂದ್ರ ರಾವ್ (ಮೇಸ್ಟ್ರು) ಅವರ ಸಹೋದರನ ಪುತ್ರ ಹರಿಶ್ಚಂದ್ರ, ಎಳೆಯ ಪ್ರಾಯದಲ್ಲೇ ಮೇಷ್ಟ್ರು ಪ್ರಭಾವದಿಂದಾಗಿ ಎಡಪಂಥೀಯ ಚಳವಳಿಗೆ ಆಕರ್ಷಿತರಾಗಿ ದುಡಿಯುವ ವರ್ಗದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದರು.
ಬಳಿಕ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ ಹರಿಶ್ಚಂದ್ರ, ಹಂತ ಹಂತವಾಗಿ ಭಡ್ತಿ ಹೊಂದಿ ನಿವೃತ್ತಿ ವೇಳೆಗೆ ಉನ್ನತ ಮಟ್ಟದ ಅಧಿಕಾರಿಯಾಗಿದ್ದರು. ಬಳಿಕ ಮತ್ತೆ ದುಡಿಯುವ ವರ್ಗದ ಹಾಗೂ ಜನಪರ ಚಳವಳಿಯೊಂದಿಗೆ ಗುರುತಿಸುವ ಮೂಲಕ ವಿದ್ಯಾರ್ಥಿ ಯುವಜನರಿಗೆ ಸ್ಫೂರ್ತಿಯಾಗಿದ್ದರು.

ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಮೃದು ಸ್ವಭಾವದ ಹರಿಶ್ಚಂದ್ರ ಪ್ರಗತಿಪರ ಚಿಂತಕರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮಾತುಗಳಿಂದ ಎಲ್ಲ ವಿಭಾಗದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ತನ್ನ ಅಜ್ಜನಿಂದಲೇ ಸ್ಥಾಪಿಸಲ್ಪಟ್ಟ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಾಲೆಯ ಉಳಿವಿಗಾಗಿ ಅವಿರತವಾಗಿ ಶ್ರಮಿಸಿದ್ದರು.

ಹರಿಶ್ಚಂದ್ರರವರ ಹಿರಿಯ ಮಗ ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದು, 2018ರ ಜೂನ್ ತಿಂಗಳಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಇದರಿಂದ ತೀವ್ರ ಆಘಾತಗೊಳಗಾದ ಹರಿಶ್ಚಂದ್ರ ಪತ್ನಿ ವಸಂತಿ ರಾವ್ ಸೆಪ್ಟಂಬರ್‌ನಲ್ಲಿ ನಿಧನ ಹೊಂದಿದ್ದರು. ಪ್ರಸ್ತುತ ಹರಿಶ್ಚಂದ್ರರವರು ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.

ಹರಿಶ್ಚಂದ್ರ ರಾವ್ ನಿಧನಕ್ಕೆ ಸಿಪಿಎಂ, ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯುನ ಜಿಲ್ಲಾ ಸಮಿತಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News