ಕಾರ್ಕಳ: ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳ ತಂಡ ದಾಳಿ- ಸೊತ್ತು ವಶ

Update: 2019-02-19 14:43 GMT

ಕಾರ್ಕಳ, ಫೆ.19: ತಾಲೂಕಿನ ಸೂಡಾ ಮತ್ತು ನಿಟ್ಟೆಯಲ್ಲಿ ನಡೆಯುತ್ತಿದ್ದ ಮೂರು ಅಕ್ರಮ ಗಣಿಗಾರಿಕೆಗೆ ಇಂದು ದಾಳಿ ನಡೆಸಿದ ಅಧಿಕಾರಿಗಳ ತಂಡ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಲೋಕಾಯುಕ್ತ ಹಾಗೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ದೂರಿನ ಆಧಾರದಲ್ಲಿ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ್ ನೇತೃತ್ವದಲ್ಲಿ ಕಾರ್ಕಳ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹದೇಶ್ವರ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಮತ್ತು ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ತಂಡ ಈ ದಾಳಿ ನಡೆಸಿದೆ.

ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸೂಡಾ ಗ್ರಾಮದ ಶ್ರೀನಿಧಿ ಸ್ಟೋನ್ ಕ್ರಷರ್ ಹಾಗೂ ಸೂಡಾ ಗ್ರಾಮದ ಜೋಯ್ ಓರಿಯಂಟಲ್ ಗ್ರೆನೈಟ್ ಮತ್ತು ಸ್ಟೋನ್ ಕ್ರಷರ್, ನಿಟ್ಟೆ ಗ್ರಾಮದ ಮಹಾಗಣಪತಿ ಸ್ಟೋನ್ ಕ್ರಷರ್ ಮತ್ತು ದಾಮೋದರ್ ಕ್ರಷರ್‌ಗಳಿಗೆ ದಾಳಿ ನಡೆಸಿದ ತಂಡ ಗಣಿಗಾರಿಕೆಗೆ ಬಳಸುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News