ಆಳ್ವಾಸ್ ಕಾಲೇಜ್‍ಗೆ ಎನ್.ಸಿ.ಸಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ

Update: 2019-02-19 15:05 GMT

ಮೂಡಬಿದಿರೆ, ಫೆ. 19: ಆಳ್ವಾಸ್ ಕಾಲೇಜ್ ಎನ್.ಸಿ.ಸಿ ಹಿರಿಯ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿಯನ್ನು ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯ ಬೆಂಗಳೂರು ಇವರಿಂದ ಪಡೆದುಕೊಂಡಿದೆ.

ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನಡೆದ ವಾರ್ಷಿಕ ಅಭಿನಂದನಾ ಸಮಾರಂಭದಲ್ಲಿ ಬ್ರಿಗೇಡಿಯರ್ ಪೂರ್ವಿಮಠ್ ಉಪಮಹಾ ನಿರ್ದೇಶಕರವರು, ಆಳ್ವಾಸ್ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಕ್ಯಾಪ್ಟನ್ ಡಾ. ರಾಜೇಶ್‍ರವರಿಗೆ ಟ್ರೋಫಿ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಆಳ್ವಾಸ್ ಕಾಲೇಜಿನಲ್ಲಿ ಕಳೆದ ಹತ್ತು  ವರ್ಷಗಳಿಂದ ದೇಶದ ಬಲಿಷ್ಠ ಯುವ ಸಂಸ್ಥೆ ಎನ್.ಸಿ.ಸಿಯ ಸೈನಿಕ, ನೌಕ ಮತ್ತು ವಾಯುದಳಗಳು ಕಾರ್ಯ ನಿರ್ವಹಿಸಿದ್ದು, ಈ ಮೊದಲು ಮೂರು ಬಾರಿ ದ್ವಿತೀಯ  ಪ್ರಶಸ್ತಿಯನ್ನು ಪಡೆದಿದ್ದು, ಈ ಬಾರಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ ಮಾದರಿ ಶಿಕ್ಷಣ ಸಂಸ್ಥೆಯಾಗಿದೆ. ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ಮಹಾನಿರ್ದೇಶನಾಲಯದ ಶಿಕ್ಷಣ ಸಂಸ್ಥೆಗಳು ಎನ್.ಸಿ.ಸಿಯ ಚಟುವಟಿಕೆಗಳ ನಿರ್ವಹಣೆಯನ್ನು ಪರೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಎರಡು ಕೆಡೆಟ್‍ಗಳು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದು, ಒಬ್ಬ ವಿದ್ಯಾರ್ಥಿನಿ ಎನ್.ಸಿ.ಸಿಯ ಏಕೈಕ ಕಠಿಣ ಶಿಬಿರ ಫಳ್‍ಸೈನಿಕ ದೆಹಲಿಯಲ್ಲಿ ಭಾಗವಹಿಸಿದ್ದು, ಎರಡು ವಿದ್ಯಾರ್ಥಿಗಳು ವಿಶೇಷ ರಾಷ್ಟ್ರೀಯ ಭಾವೈಕ್ಯತ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಇದೇ ರೀತಿ ಎನ್.ಸಿ.ಸಿಯ ವಿವಿಧ ಸ್ಥರದ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ನಿರ್ವಹಣೆ ನೀಡಿದ್ದು ಎನ್.ಸಿ.ಸಿಯ "ಬಿ" ಮತ್ತು "ಸಿ" ಸರ್ಟಿಫಿಕೆಟ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶವನ್ನು ಗಳಿಸಿರುತ್ತಾರೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಎಸ್.ಸಿ.ಸಿ ದಿನಾಚರಣೆ ಮತ್ತು ವಿಶೇಷ ಸಂದರ್ಭಗಳಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಪಾಶಸ್ತ್ಯ ನೀಡಿ ದೇಶದ ಮಟ್ಟಕ್ಕೆ ಮಾದರಿಯಾಗಿದೆ. ಸಂಸ್ಥೆಯಲ್ಲಿ ಎನ್.ಸಿ.ಸಿ ಶಿಬಿರಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇರುವ ಏಕೈಕ ಸಂಸ್ಥೆಯಾಗಿದೆ. ಸಂಸ್ಥೆಯಲ್ಲಿನ ಎನ್.ಸಿ.ಸಿ ವಿದ್ಯಾರ್ಥಿಗಳು ದೇಶದ ರಕ್ಷಣ ಸೇವೆಯಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಆಳ್ವಾಸ್ ಕಾಲೇಜು ಉತ್ತಮ ಶಿಕ್ಷಣ ಸಂಸ್ಥೆಗೆ ಭಾಜನರಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವಾರು ಎನ್.ಸಿ.ಸಿ ಕೆಡೆಟ್‍ಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News