ನಿಮಗೆ ಸಾಧ್ಯವಾಗದಿದ್ದರೆ, ಮಸೂದ್ ‌ನನ್ನು ನಾವು ಹಿಡಿಯುತ್ತೇವೆ: ಇಮ್ರಾನ್‌ ಖಾನ್‌ ಗೆ ಅಮರೀಂದರ್ ಸವಾಲು

Update: 2019-02-19 15:13 GMT

ಹೊಸದಿಲ್ಲಿ, ಫೆ.19: ಪುಲ್ವಾಮ ಭಯೋತ್ಪಾದಕ ದಾಳಿ ಬಗ್ಗೆ ಯಾವುದೇ ಕ್ರಿಯಾತ್ಮಕವಾದ ಗುಪ್ತಚರ ಮಾಹಿತಿ ಲಭ್ಯವಾದಲ್ಲಿ ತಾನು ಕ್ರಮ ಕೈಗೊಳ್ಳುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್ ಅವರು, ‘‘ಪುಲ್ವಾಮ ದಾಳಿಯ ಸೂತ್ರಧಾರಿ ಪಾಕಿಸ್ತಾನದಲ್ಲಿದ್ದಾನೆ, ಮತ್ತು ನಿಮ್ಮ ದೇಶ ಆ ಭಯೋತ್ಪಾದಕನನ್ನು ಬಂಧಿ ಸಲು ಸಾಧ್ಯವಾಗದೆ ಇದ್ದಲ್ಲಿ, ಆ ಕೆಲಸವನ್ನು ನಿಮ್ಮ ಪರವಾಗಿ ನಾವು ಮಾಡಲಿದ್ದೇವೆ’’ ಎಂದು ಹೇಳಿದ್ದಾರೆ.

‘‘ಆತ್ಮೀಯ ಇಮ್ರಾನ್ ಖಾನ್, ಜೈಶೆ ಮುಹಮ್ಮದ್ ವರಿಷ್ಠ ಮಸೂದ್ ಅಝರ್, ಬಹಾಪುರದಲ್ಲಿ ಕೂತಿದ್ದಾನೆ ಹಾಗೂ ಆತ ಐಸಿಐನ ನೆರವಿನೊಂದಿಗೆ ದಾಳಿಗಳನ್ನು ಆಯೋಜಿಸುತ್ತಿದ್ದಾನೆ. ಅಲ್ಲಿಗೇ ಹೋಗಿ ಅವನನ್ನು ಬಂಧಿಸಿ. ನಿಮಗೆ ಸಾಧ್ಯವಾಗದಿದ್ದರೆ, ನಮಗೆ ತಿಳಿಸಿ. ನಿಮಗಾಗಿ ನಾವು ಆತನನ್ನು ಹಿಡಿದುಕೊಡಲಿದ್ದೇವೆ. ಅಂದಹಾಗೆ 26/11 ಮುಂಬೈ ಭಯೋತ್ಪಾದಕ ದಾಳಿಯ ಕುರಿತು ನೀಡಲಾದ ಸಾಕ್ಷ್ಯಾಧಾರಗಳನ್ನು ಏನು ಮಾಡಲಾಯಿತೆಂದು ಗೊತ್ತಿದೆ. ನುಡಿದಂತೆ ನಡೆದುಕೊಳ್ಳುವ ಸಮಯ ಈಗ ಬಂದಿದೆ ’’ ಎಂದು ಸಿಂಗ್ ಟ್ವೀಟಿಸಿದ್ದಾರೆ.

ಭಯೋತ್ಪಾದಕ ಗುಂಪುಗಳಿಗೆ ಹಾಗೂ ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ರವಾನಿಸಲು ಭದ್ರತಾ ಪಡೆಗಳು ಪುಲ್ವಾಮದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆಯ ಎರಡು ಪಟ್ಟು ಅಧಿಕ ಉಗ್ರರನ್ನು ಹತ್ಯೆಗೈಯಬೇಕೆಂದು, ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಮುನ್ನ ಸೇನೆಯಲ್ಲಿ ಸೇವೆಸಲ್ಲಿಸಿದ್ದ ಅಮರೀಂದರ್‌ಸಿಂಗ್ ಸೋಮವಾರ ಕರೆ ನೀಡಿದ್ದರು. ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ನ್ಯಾಯದಂತೆ ‘‘ನಮ್ಮ 41 ಮಂದಿ ಸಾವನ್ನಪ್ಪಿದ್ದರೆ, ಅವರಲ್ಲಿ 82 ಮಂದಿಯನ್ನು ಕೊಲ್ಲಬೇಕಾಗಿದೆ’’ ಎಂದು ಹೇಳಿದ ಸಿಂಗ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News