ಅಪಘಾತ ನಡೆಸಿ ಪರಾರಿಯಾಗಲೆತ್ನಿಸಿದ ಮಾದಕ ದ್ರವ್ಯದ ಅಮಲಿನಲ್ಲಿದ್ದ ಕಾರು ಚಾಲಕ

Update: 2019-02-19 16:11 GMT

ಮಂಗಳೂರು, ಫೆ.19: ಮಾದಕ ದ್ರವ್ಯದ ಅಮಲಿನಲ್ಲಿದ್ದ ಕಾರಿನ ಚಾಲಕನೋರ್ವ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ್ದು, ಆತನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ನಡೆದಿದೆ.

ಪ್ರತಿದಿನ ಜನನಿಬಿಡ ಪ್ರದೇಶವಾಗಿರುವ ಮಂಗಳೂರು ತಾಲೂಕು ಪಂಚಾಯತ್ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿನಿ ವಿಧಾನಸೌಧದ ಪಾರ್ಕಿಂಗ್ ನಲ್ಲಿ ತಾನು ಬಂದಿದ್ದ ವ್ಯಾಗನಾರ್ ಕಾರನ್ನು ರಭಸವಾಗಿ ಚಲಾಯಿಸಿದ ಪರಿಣಾಮ ವಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇರಳದಿಂದ ಆಗಮಿಸಿದ್ದ ಉಸ್ಮಾನ್ ಸಅದಿ ಪಟ್ಟೋರಿ ಎಂಬವರ ಸ್ವಿಫ್ಟ್ ಕಾರಿಗೆ ಢಿಕ್ಕಿಯಾಗಿದ್ದು, ಆರೋಪಿ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ.

ಆರೋಪಿ ಚಾಲಕನನ್ನು ಬಳಿಕ ಸಾರ್ವಜನಿಕರ ಸಹಕಾರದಿಂದ ಮಂಗಳೂರು ನಗರ ಸಂಚಾರ ಪೊಲೀಸರು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಚಾಲಕನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಚಾಲಕನ ವಿವರ ತಿಳಿದುಬಂದಿಲ್ಲ.

ಚಾಲಕ ಮಾದಕ ದ್ರವ್ಯದ ಅಮಲಿನಲ್ಲಿದ್ದ ಎಂದು ತಿಳಿದುಬಂದಿದ್ದು, ಆರೋಪಿ ಚಾಲಕನ ಅಜಾಗರೂಕತೆಯಿಂದ ಹಲವಾರು ಜನರ ಪ್ರಾಣಕ್ಕೆ ಕಾರಣವಾಗುತ್ತಿದ್ದ ಎಂದು ಈ ಘಟನೆಯ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News