ಕಳ್ಳಭಟ್ಟಿ ಸೇವನೆಯಿಂದ 150 ಸಾವು: ಆದಿತ್ಯನಾಥ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2019-02-19 15:42 GMT

ಹೊಸದಿಲ್ಲಿ,ಫೆ.19: ಮೈನಪುರಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವನೆಯಿಂದ 150 ಜನರ ಸಾವುಗಳ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸನ್ನು ಜಾರಿಗೊಳಿಸಿದ್ದು,ನಾಲ್ಕು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಪುಸಾನಿಯಾ ಗ್ರಾಮದಲ್ಲಿಯ 300 ಕುಟುಂಬಗಳಲ್ಲಿ 25ರಿಂದ 65ರ ಹರೆಯದ 150 ವಿಧವೆಯರಿದ್ದು,ಇವರ ಗಂಡಂದಿರು ಕಳೆದ 15 ವರ್ಷಗಳಲ್ಲಿ ಮೈನಪುರಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟಿದ್ದಾರೆ ಎಂಬ ಮಾಧ್ಯಮ ವರದಿಯನ್ನು ತಾನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವುದಾಗಿ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಮಾಧ್ಯಮ ವರದಿಯು ನಿಜವಾಗಿದ್ದಲ್ಲಿ ಅದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳ ವೈಫಲ್ಯವನ್ನು ಸೂಚಿಸುತ್ತದೆ ಮತ್ತು ಇದರಿಂದಾಗಿ ಹತಾಶ ಕುಟುಂಬಗಳು ತಮ್ಮ ಜೀವನ,ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳಿಂದ ವಂಚಿತರಾಗಿ ದಯನೀಯ ಬದುಕನ್ನು ಸಾಗಿಸುವಂತಾಗಿದೆ ಎಂದು ಹೇಳಿರುವ ಆಯೋಗವು,ಈ ಪ್ರದೇಶದಲ್ಲಿ ವರ್ಷಗಳಿಂದಲೂ ಕಳ್ಳಭಟ್ಟಿ ದಂಧೆ ಹುಲುಸಾಗಿ ಬೆಳೆಯುತ್ತಿದೆ ಮತ್ತು ಇದನ್ನು ಹತ್ತಿಕ್ಕಲು ಯಾವುದೇ ಕ್ರಮವನ್ನು ಕೈಗೊಂಡಂತಿಲ್ಲ ಎಂದಿದೆ.

ಇತ್ತೀಚಿಗೆ ಉ.ಪ್ರದೇಶದ ಸಹಾರನಪುರ ಮತ್ತು ಕುಷಿನಗರ ಜಿಲ್ಲೆಗಳಲ್ಲಿ ಮತ್ತು ನೆರೆಯ ಉತ್ತರಾಖಂಡದ ಹರಿದ್ವಾರ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವನೆಯಿಂದ 100 ಜನರು ಮೃತಪಟ್ಟಿದ್ದರು.

ಉತ್ತರಾಖಂಡ-ಉ.ಪ್ರದೇಶ ಗಡಿಗೆ ಸಮೀಪದಲ್ಲಿರುವ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಕೆಯಾಗುತ್ತದೆ ಎಂದು ಶಂಕಿಸಲಾಗಿದೆ. ಪುಸಾನಿಯಾ ಗ್ರಾಮವೊಂದರಲ್ಲೇ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳ ಮೂಗಿನಡಿಗೇ ದಿನಕ್ಕೆ 600ರಿಂದ 700 ಲೀ. ಕಳ್ಳಭಟ್ಟಿ ತಯಾರಾಗುತ್ತದೆ. ಈ ಪೈಕಿ 60 ರಿಂದ 80 ಲೀ.ಕಳ್ಳಭಟ್ಟಿಯನ್ನು ಗ್ರಾಮಸ್ಥರು ಸೇವಿಸುತ್ತಾರೆ ಮತ್ತು ಉಳಿದಿದ್ದನ್ನು ಸಮೀಪದ ಗ್ರಾಮಗಳು ಮತ್ತು ಜಿಲ್ಲೆಗಳಿಗೆ ಪೂರೈಸಲಾಗುತ್ತದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಆಯೋಗವು ಹೇಳಿದೆ.

ಗ್ರಾಮದಲ್ಲಿ ಕಳ್ಳಭಟ್ಟಿ ದಂಧೆ ಈಗ ಕಡಿಮೆಯಾಗಿದ್ದರೂ ಮುಂದುವರಿದಿದೆ. ಈ ಅಕ್ರಮ ವ್ಯವಹಾರವನ್ನು ನಿಲ್ಲಿಸಲು ತಾನು ಪ್ರಯತ್ನಿಸಿದಾಗ ಕಳ್ಳಭಟ್ಟಿ ಮಾಫಿಯಾದಿಂದ ತನಗೆ ಬೆದರಿಕೆಗಳು ಬಂದಿದ್ದವು ಎಂದು ಗ್ರಾಮದ ಪ್ರಧಾನ ಕೂಡ ತಿಳಿಸಿದ್ದಾನೆ ಎಂದಿರುವ ಆಯೋಗವು,10 ವರ್ಷದ ಮಕ್ಕಳೂ ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಮುಂದೆ ಅವರೂ ಕಳ್ಳಭಟ್ಟಿಯನ್ನು ಸೇವಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ಅಕ್ರಮ ದಂಧೆಯನ್ನು ನಿಲ್ಲಿಸಲು ತಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಕಳ್ಳಭಟ್ಟಿ ಮಾಫಿಯಾದ ಕೆಲವು ಮುಖಂಡರ 11 ಕೋ.ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಜಾಲವನ್ನು ನಾಶಗೊಳಿಸಲು ಪೊಲೀಸರು ದಾಳಿಗಳನ್ನೂ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿರುವುದನ್ನು ಆಯೋಗವು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News