ಮಂಗಳೂರು-ಯಶವಂತಪುರ ನಡುವೆ ಹೊಸ ರೈಲು ಫೆ.21ರಿಂದ ಆರಂಭ

Update: 2019-02-19 16:00 GMT

ಮಂಗಳೂರು,ಫೆ.19: ಮಂಗಳೂರು-ಯಶವಂತಪುರ ನಡುವೆ ಹೊಸ ರಾತ್ರಿ ರೈಲು ಫೆ.22ರಿಂದ ತನ್ನ ನಿಯಮಿತ ಸಂಚಾರವನ್ನು ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆಯು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ನೂತನ ರೈಲು ವಾರಕ್ಕೆ ಮೂರು ದಿನ ಸಂಚರಿಸಲಿದೆ.

ದಕ್ಷಿಣ ಕನ್ನಡ ಸಂಸದ ನಳಿನಕುಮಾರ್ ಕಟೀಲ್ ಅವರು ಫೆ.21ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಉದ್ಘಾಟನಾ ವಿಶೇಷ ರೈಲಿಗೆ ಹಸಿರು ನಿಶಾನೆಯನ್ನು ತೋರಿಸಲಿದ್ದಾರೆ. ಅಂದು ವಿಶೇಷ ರೈಲು ಕಬಕ ಪುತ್ತೂರುವರೆಗೆ ಸಂಚರಿಸಲಿದೆ.

ರೈಲು ಸಂಖ್ಯೆ 16585/16586 ಫೆ.22ರಿಂದ ನೆಲಮಂಗಲ,ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಸಂಚರಿಸಲಿದೆ.

ರೈಲು ಸಂಖ್ಯೆ 16586 ಫೆ.22ರಂದು ಸಂಜೆ ಏಳು ಗಂಟೆಗೆ ತನ್ನ ಪ್ರಥಮ ಯಾನವನ್ನು ಆರಂಭಿಸಲಿದ್ದು,ಮರುದಿನ ಬೆಳಿಗ್ಗೆ ಐದು ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಮರುಪ್ರಯಾಣದಲ್ಲಿ ರೈಲು ಫೆ.24ರಂದು ಸಂಜೆ 4:30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಮಂಗಳೂರನ್ನು ತಲುಪಲಿದೆ ಎಂದು ಪ್ರಕಟಣೆಯು ತಿಳಿಸಿದೆ.

ರೈಲು ಒಂದು 2-ಟಯರ್ ಎಸಿ ಕೋಚ್,ಒಂದು 3-ಟಯರ್ ಎಸಿ ಕೋಚ್,ಏಳು ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ಗಳು,ಮೂರು ಜನರಲ್ ದ್ವಿತೀಯ ದರ್ಜೆಯ ಕೋಚ್‌ಗಳು ಮತ್ತು ಎರಡು ದ್ವಿತೀಯ ದರ್ಜೆ ಲಗ್ಗೇಜ್ ಕಮ್ ಬ್ರೇಕ್ ವ್ಯಾನ್‌ಗಳನ್ನು ಹೊಂದಿರಲಿದೆ ಎಂದು ಪ್ರಕಟಣೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News