ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಗೇಲಿ ಮಾಡುವವರಿಗೆ ಶಿಕ್ಷೆಯಾಗಬೇಕು: ಮೋದಿ

Update: 2019-02-19 16:05 GMT

ವಾರಣಾಸಿ,ಫೆ.19: ಶನಿವಾರ ತನ್ನ ಉದ್ಘಾಟನಾ ಸಂಚಾರದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗೊಳಗಾಗಿದ್ದ ಭಾರತದ ಮೊದಲ ಇಂಜಿನ್ ‌ರಹಿತ ರೈಲು ವಂದೇ ಭಾರತ ಎಕ್ಸ್‌ಪ್ರೆಸ್‌ನ್ನು ಗೇಲಿ ಮಾಡುತ್ತಿರುವವರನ್ನು ಭಾರತದ ಇಂಜಿನಿಯರ್‌ಗಳನ್ನು ಮತ್ತು ತಂತ್ರಜ್ಞರನ್ನು ಅವಮಾನಿಸುತ್ತಿರುವುದಕ್ಕಾಗಿ ದಂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ರ್ಯಾಲಿಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಯವರ ಈ ಹೇಳಿಕೆಯು ರೈಲನ್ನು ಆರಂಭಿಸಲು ಸರಕಾರವು ಅವಸರಿಸುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರವಾಗಿರುವಂತಿದೆ.

ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಅವಮಾನಿಸುತ್ತಿರುವ ಹಾಗೂ ದೇಶವನ್ನು ಗೇಲಿ ಮಾಡುತ್ತಿರುವ ಇಂತಹವರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದ ಮೋದಿ,ಭವಿಷ್ಯದಲ್ಲಿ ಭಾರತದಲ್ಲಿ ಬುಲೆಟ್ ರೈಲನ್ನು ತಯಾರಿಸಲಿರುವ ಇಂಜಿನಿಯರ್‌ಗಳನ್ನು ತಾನು ವಂದಿಸುತ್ತೇನೆ. ಟೀಕೆಗಳಿಂದ ನೋವನ್ನು ಅನುಭವಿಸಿರುವವರಿಂದ ತನಗೆ ಪತ್ರಗಳು ಬರುತ್ತಿವೆ. ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಅವಮಾನಿಸುವುದು ಸರಿಯೇ?, ಅವರನ್ನು ಗೇಲಿ ಮಾಡುವುದು ಸರಿಯೇ?, ಟೀಕಾಕಾರರಿಗೆ ಸಕಾಲದಲ್ಲಿ ಸೂಕ್ತವಾಗಿ ದಂಡಿಸಬಾರದೇ ಎಂದು ಪ್ರಶ್ನಿಸಿದರು.

ಶನಿವಾರ ತನ್ನ ಉದ್ಘಾಟನಾ ಸಂಚಾರದಲ್ಲಿ ವಾರಣಾಸಿಯಿಂದ ದಿಲ್ಲಿಗೆ ಮರುಪ್ರಯಾಣದ ಸಂದರ್ಭದಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್ ದಿಲ್ಲಿಯಿಂದ ಸುಮಾರು 200 ಕಿ.ಮೀ.ದೂರದಲ್ಲಿ ಕೆಟ್ಟು ನಿಂತಿತ್ತು ಮತ್ತು ರೈಲ್ವೆ ಅಧಿಕಾರಿಗಳು ಮತ್ತು ಪತ್ರಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ರೈಲಿನ ಮೂಲಕ ಸಾಗಿಸಲಾಗಿತ್ತು. ನಿಯಂತ್ರಣ ವ್ಯವಸ್ಥೆಯ ವೈಫಲ್ಯಕ್ಕೊಳಗಾಗಿದ್ದ ರೈಲು ಬಳಿಕ ನಿಧಾನವಾಗಿ ಚಲಿಸುತ್ತ ಗಂಟೆಗಳಷ್ಟು ಕಾಲ ವಿಳಂಬವಾಗಿ ದಿಲ್ಲಿಯನ್ನು ತಲುಪಿತ್ತು. ಅಲ್ಲಿ ದೋಷವನ್ನು ಸರಿಪಡಿಸಿದ ನಂತರ ಮರುದಿನದಿಂದ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಸ್‌ಪಿ ನಾಯಕ ಅಖಿಲೇಶ್ ಯಾದವ ಅವರು ಈ ಘಟನೆಯ ಕುರಿತು ಸರಕಾರವನ್ನು ಪ್ರಶ್ನಿಸಿದ್ದರು. ರಾಹುಲ್ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನೂ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News