ದೇಶಕ್ಕೆ ಬುಲೆಟ್ ರೈಲಿಗಿಂತ, ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್‌ ಅಗತ್ಯ: ಅಖಿಲೇಶ್ ಯಾದವ್

Update: 2019-02-19 16:08 GMT

ಲಕ್ನೋ, ಫೆ. 19: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಬುಲೆಟ್ ರೈಲು ನೀಡುವುದಕ್ಕಿಂತ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯನ್ನು ತರಾಟೆಗೆ ತೆಗೆದುಕೊಂಡರು.

ಇಂದು ದೇಶಕ್ಕೆ ಬುಲೆಟ್ ಟ್ರೈನ್‌ನ ಅಗತ್ಯತೆ ಇಲ್ಲ. ಬದಲಾಗಿ ನಮ್ಮ ಯೋಧರಿಗೆ ಬುಲೆಟ್ ಫ್ರೂಫ್ ಜಾಕೆಟ್‌ನ ಅಗತ್ಯತೆ ಇದೆ ಎಂದು ಅವರು ಹೇಳಿದರು. ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ. ಬೇಹುಗಾರಿಕಾ ಏಜೆನ್ಸಿ ಬಗ್ಗೆ ಪ್ರಶ್ನೆ ಎತ್ತಿರುವ ಅಖಿಲೇಶ್ ಯಾದವ್, ದೇಶದ ಗಡಿ ಸಂರಕ್ಷಿಸಲು ಕೇಂದ್ರ ಸರಕಾರ ದೀರ್ಘಕಾಲೀನ ವ್ಯೆಹಾತ್ಮಕತೆ ರೂಪಿಸಬೇಕು ಎಂದು ಕರೆ ನೀಡಿದರು.

ನಮ್ಮ ಬೇಹುಗಾರಿಕೆ ಯಾಕೆ ವಿಫಲವಾಗಿದೆ ? ಎಂದು ಪ್ರಶ್ನಿಸಿದ ಅವರು, ನಿಮಗೆ ಹುತಾತ್ಮ ಯೋಧರ ಜೀವಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ದೇಶದ ಜನರು ಭದ್ರತಾ ಪಡೆಗಳು ಹಾಗೂ ಯೋಧರೊಂದಿಗೆ ನಿಲ್ಲುತ್ತಾರೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಬೇಕು. ಆಡಳಿತಾರೂಢ ಪಕ್ಷ ಕೂಡ ತನ್ನ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಿ ಗಡಿ ರಕ್ಷಣೆಗೆ ದೀರ್ಘಾವಧಿಯ ಕಾರ್ಯತಂತ್ರ ರೂಪಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News