ಕೋಟ ಜೋಡಿಕೊಲೆ ಪ್ರಕರಣ: ಡಿಎಆರ್ ಸಿಬ್ಬಂದಿ ಪೊಲೀಸ್ ಕಸ್ಟಡಿಗೆ

Update: 2019-02-19 16:28 GMT
ಮೃತ ಯುವಕರು 

ಕುಂದಾಪುರ, ಫೆ.19: ಕೋಟ ಮಣೂರು ಗ್ರಾಮದ ಚಿಕ್ಕನಕೆರೆ ಯುವಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಯ ಸಿಬ್ಬಂದಿ ಪವನ್ ಅಮೀನ್(31) ಎಂಬಾತನನ್ನು ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.

ಹೆಚ್ಚಿನ ತನಿಖೆಗಾಗಿ ಆರೋಪಿ ಪವನ್ ಅಮೀನ್‌ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ಡಿವೈಎಸ್ಪಿ ಜೈಶಂಕರ್ ಪರವಾಗಿ ಸರಕಾರಿ ಸಹಾಯಕ ಅಭಿಯೋಜಕಿ ಸುಮಂಗಲಾ ನಾಯಕ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಶ್ರೀಕಾಂತ್ ಆರೋಪಿಯನ್ನು ಫೆ.22ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.

ಪ್ರಕರಣದ ಆರೋಪಿಗಳಾದ ಚಂದ್ರಶೇಖರ್ ರೆಡ್ಡಿ ಹಾಗೂ ಸುಜಯ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದು, ಇವರ ಕಸ್ಟಡಿ ಅವಧಿ ಫೆ.20ರಂದು ಮುಗಿಯಲಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಹಾಗೂ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ 14 ಮಂದಿ ಆರೋಪಿಗಳು ಮಾ.1ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜಾಮೀನು ಅರ್ಜಿ ತಿರಸ್ಕೃತ: ಆರೋಪಿಗಳಾದ ಪೊಲೀಸ್ ಸಿಬ್ಬಂದಿ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ವಿದ್ಯಾರ್ಥಿ ಪ್ರಣವ್ ರಾವ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಹೆಚ್ಚುವರಿ ನ್ಯಾಯಾಲಯ ಇಂದು ತಿರಸ್ಕರಿಸಿದೆ.

ವಕೀಲ ರವಿಕಿರಣ್ ಮುರ್ಡೇಶ್ವರ ಈ ಮೂವರಿಗೆ ಜಾಮೀನು ಕೋರಿ ಫೆ.15ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಸರಕಾರಿ ಸಹಾಯಕ ಅಭಿ ಯೋಜಕಿ ಸುಮಂಗಲಾ ನಾಯಕ್ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಶ್ರೀಕಾಂತ್ ಈ ಮೂವರಿಗೆ ಜಾಮೀನು ನೀಡಲು ನಿರಾಕರಿಸಿ ಆದೇಶ ನೀಡಿದು.

ಮತ್ತೋರ್ವ ಆರೋಪಿ ಸೆರೆ

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದಲ್ಲಿ ಬ್ರಹ್ಮಾವರ ಅಭಿನೇತ್ರಿ ಪೆಟ್ರೋಲ್ ಬಂಕ್ ಬಳಿಯ ಮುಹಮ್ಮದ್ ತೌಸಿಫ್ (28) ಎಂಬಾತನನ್ನು ಪೊಲೀಸರು ಫೆ.18ರಂದು ಬ್ರಹ್ಮಾವರದ ಕೊಳಂಬೆ ಎಂಬಲ್ಲಿ ಬಂಧಿಸಿದ್ದಾರೆ.

ಈ ಮೂಲಕ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ 17ಕ್ಕೆ ಏರಿದೆ. ತೌಸಿಫ್ ಬ್ರಹ್ಮಾವರದಲ್ಲಿ ಮಟನ್ ಸ್ಟಾಲ್ ಹೊಂದಿದ್ದಾನೆ. ಈತನನ್ನು ಇಂದು ಪೊಲೀಸರು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News