ಪಾರಿಕ್ಕರ್ ಬದುಕಿರುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ: ಗೋವಾ ಉಪಸ್ಪೀಕರ್

Update: 2019-02-19 16:39 GMT

ಪಣಜಿ,ಫೆ.19: ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ಬದುಕಿರುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ,ಆದರೆ ಮೇದೋಜ್ಜೀರಕ ಗ್ರಂಥಿಯ ಕಾಯಿಲೆಯಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುತ್ತವೆ ಎಂದು ರಾಜ್ಯ ವಿಧಾನಸಭೆಯ ಉಪಾಧ್ಯಕ್ಷ ಹಾಗೂ ಆಡಳಿತ ಬಿಜೆಪಿ ಶಾಸಕ ಮೈಕೇಲ್ ಲೋಬೊ ಅವರು ಮಂಗಳವಾರ ಹೇಳಿದರು.

ತನ್ನ ಕ್ಷೇತ್ರ ಕಲಂಗುಟ್‌ನಲ್ಲಿ ಗ್ರಾಮ ಪಂಚಾಯತ್ ಏರ್ಪಡಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತನ್ನ ಅನಾರೋಗ್ಯದಲ್ಲಿಯೂ ಪಾರಿಕ್ಕರ್ ರಾಜ್ಯವನ್ನು ಮುನ್ನಡೆಸುತ್ತಿರುವವರೆಗೂ ಹಾಲಿ ಬಿಜೆಪಿ ನೇತೃತ್ವದ ಸಮಿಶ್ರ ಸರಕಾರವು ಅಧಿಕಾರದಲ್ಲಿರುತ್ತದೆ. ಅವರು ವಿಶ್ರಾಂತಿಯನ್ನೆಂದೂ ಬಯಸದ ವ್ಯಕ್ತಿಯಾಗಿದ್ದಾರೆ. ಈ ಜಗತ್ತಿನಲ್ಲಿ ಬದುಕಿರುವವರೆಗೂ ಅವರು ಅಧಿಕಾರದಲ್ಲಿರುತ್ತಾರೆ ಮತ್ತು ಗೋವಾದ ಜನತೆಗಾಗಿ ಸೇವೆಯನ್ನು ಮುಂದುವರಿಸುತ್ತಾರೆ ಎಂದು ತಾನು ಭಾವಿಸಿದ್ದೇನೆ ಎಂದರು.

ಪಾರಿಕ್ಕರ್ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಮೇದೋಜ್ಜೀರಕ ಗ್ರಂಥಿಯ ಕಾಯಿಲೆಯಿಂದ ನರಳುತ್ತಿದ್ದಾರೆ.

ಅವರು ತನ್ನ ಕರ್ತವ್ಯವನ್ನು ನಿರ್ವಹಿಸಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದೂ,ವಿಶೇಷವಾಗಿ ಅವರ ಆರೋಗ್ಯ ದೇವರ ಕೈಯಲಿದೆ. ಇಲ್ಲಿ ಯಾರೂ ಶಾಶ್ವತರಲ್ಲ. ಅವರಿಗೇನಾದರೂ ಸಂಭವಿಸಿದರೆ ಆಗ ನಾವು ಏನು ಮಾಡಬೇಕು ಎನ್ನುವುದನ್ನು ಯೋಚಿಸುತ್ತೇವೆ ಎಂದು ಲೋಬೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News