ಅಮೆರಿಕ: ಪತ್ನಿಯನ್ನು ಕೊಂದು ಭಾರತ ಮೂಲದ ವ್ಯಕ್ತಿ ಆತ್ಮಹತ್ಯೆ

Update: 2019-02-19 16:42 GMT

ಹ್ಯೂಸ್ಟನ್ (ಅಮೆರಿಕ), ಫೆ. 19: ಅಮೆರಿಕದ ಟೆಕ್ಸಾಸ್ ರಾಜ್ಯದ ಶುಗರ್‌ಲ್ಯಾಂಡ್‌ನ ಮನೆಯೊಂದರಲ್ಲಿ ಸೋಮವಾರ ಭಾರತೀಯ ಅಮೆರಿಕನ್ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಗಂಡನು ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

51 ವರ್ಷದ ಶ್ರೀನಿವಾಸ್ ನಕಿರೆಕಾಂತಿ ಮತ್ತು ಅವತ ಪತ್ನಿ 46 ವರ್ಷದ ಶಾಂತಿ ನಕಿರೆಕಾಂತಿ ಮೃತಪಟ್ಟವರು.

ಶಾಂತಿಯ ತಲೆಯಲ್ಲಿ ಗುಂಡಿನ ಗಾಯವಿದ್ದು, ಮೃತದೇಹ ಮನೆಗೆ ಬರುವ ರಸ್ತೆಯಲ್ಲಿ ಪತ್ತೆಯಾದರೆ, ಶ್ರೀನಿವಾಸ್‌ರ ಎದೆಯಲ್ಲಿ ಗುಂಡಿನ ಗಾಯವಿದ್ದು, ಮನೆಯ ಮಲಗುವ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರ ಪಕ್ಕದಲ್ಲೇ ಸಣ್ಣ ಹ್ಯಾಂಡ್‌ಗನ್ ಪತ್ತೆಯಾಗಿದೆ.

ಶ್ರೀನಿವಾಸ್ ಮೊದಲು ಶಾಂತಿಗೆ ಗುಂಡು ಹಾರಿಸಿ ಕೊಂದು ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ವೇಳೆ, ದಂಪತಿಯ 16 ವರ್ಷದ ಮಗಳು ಮನೆಯಲ್ಲೇ ಇದ್ದರು. ಪೊಲೀಸರು ಬಂದಾಗ ಬಾಗಿಲು ತೆರೆದ ಮಗಳು, ನನ್ನ ತಂದೆ ಮಲಗುವ ಕೋಣೆಯಿಂದ ಹೊರಗೆ ಬರುತ್ತಿಲ್ಲ ಎಂದು ಪೊಲೀಸರಿಗೆ ಹೇಳಿದರು.

ದಂಪತಿಗೆ 21 ವರ್ಷದ ಮಗನಿದ್ದು ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ ಎಂದು ಕುಟುಂಬದ ಸ್ನೇಹಿತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News