ಮಡುರೊ ಜೊತೆ ಇದ್ದರೆ ನಿಮಗೆ ಭವಿಷ್ಯವಿಲ್ಲ: ವೆನೆಝವೆಲ ಸೈನಿಕರಿಗೆ ಟ್ರಂಪ್ ಎಚ್ಚರಿಕೆ

Update: 2019-02-19 16:51 GMT

ಮಯಾಮಿ (ಅಮೆರಿಕ), ಫೆ. 19: ನೀವು ನಿಮ್ಮ ಭವಿಷ್ಯ ಮತ್ತು ಪ್ರಾಣಗಳಿಗೆ ಅಪಾಯ ತಂದುಕೊಳ್ಳುತ್ತೀರಿ ಎಂಬುದಾಗಿ ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊಗೆ ನಿಷ್ಠೆ ಹೊಂದಿರುವ ಸೈನಿಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಹಾಗೂ ಮಾನವೀಯ ನೆರವು ಸಾಮಗ್ರಿಗಳನ್ನು ದೇಶದೊಳಗೆ ಸಾಗಿಸಲು ಬಿಡುವಂತೆ ಒತ್ತಾಯಿಸಿದ್ದಾರೆ.

ಮಯಾಮಿಯಲ್ಲಿ ಸೋಮವಾರ ಹೆಚ್ಚಾಗಿ ವೆನೆಝುವೆಲ ಮತ್ತು ಕ್ಯೂಬಾದ ವಲಸಿಗರನ್ನೊಳಗೊಂಡ ಜನರ ಗುಂಪೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ವೆನೆಝುವೆಲದ ಸೇನೆಯು ಮಡುರೊ ಅವರನ್ನು ಬೆಂಬಲಿಸುವುದನ್ನು ಮುಂದುವರಿಸಿದರೆ, ‘‘ನಿಮಗೆ ಸುರಕ್ಷಿತ ಆಶ್ರಯ ತಾಣ ಸಿಗುವುದಿಲ್ಲ, ಸುಲಭವಾಗಿ ಹೊರ ಹೋಗಲು ಆಗುವುದಿಲ್ಲ ಹಾಗೂ ನಿಮಗೆ ಬೇರೆ ದಾರಿ ಇರುವುದಿಲ್ಲ. ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ’’ ಎಂದು ಹೇಳಿದರು.

ವೆನೆಝುವೆಲದ ಪ್ರತಿಪಕ್ಷ ನಾಯಕ ಜುವಾನ್ ಗ್ವಾಯಿಡೊಗೆ ಟ್ರಂಪ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರನ್ನು ವೆನೆಝುವೆಲದ ಮಧ್ಯಂತರ ಅಧ್ಯಕ್ಷರನ್ನಾಗಿ ಅಮೆರಿಕ, ವೆನೆಝುವೆಲದ ನೆರೆಯ ದೇಶಗಳು ಮತ್ತು ಹೆಚ್ಚಿನ ಪಾಶ್ಚಾತ್ಯ ದೇಶಗಳು ಮಾನ್ಯ ಮಾಡಿವೆ.

ಆದರೆ, ಮಡುರೊ ರಶ್ಯ ಮತ್ತು ಚೀನಾಗಳ ಬೆಂಬಲವನ್ನು ಹೊಂದಿದ್ದಾರೆ ಹಾಗೂ ಭದ್ರತಾ ವಿಭಾಗ ಸೇರಿದಂತೆ ವೆನೆಝುವೆಲದ ಸರಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ.

►ನಾಝಿ ಮಾದರಿಯ ಭಾಷಣ

ಟ್ರಂಪ್ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಮಡುರೊ, ಅದು ‘ನಾಝಿ ಮಾದರಿಯ’ ಭಾಷಣವಾಗಿತ್ತು ಎಂದಿದ್ದಾರೆ.

ತಾನು ವೆನೆಝುವೆಲದ ಯಜಮಾನ ಹಾಗೂ ಅದರ ಪ್ರಜೆಗಳು ತನ್ನ ಗುಲಾಮರು ಎಂಬ ರೀತಿಯಲ್ಲಿ ಟ್ರಂಪ್ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News