ಮಾ. 1ರಂದು ಕಡಬ, ಮೂಡುಬಿದಿರೆ ತಾಲೂಕು ಉದ್ಘಾಟನೆ: ಸಚಿವ ಯು.ಟಿ.ಖಾದರ್‌

Update: 2019-02-19 16:54 GMT

ಮಂಗಳೂರು, ಫೆ.19: ಈಗಾಗಲೆ ರಾಜ್ಯ ಸರಕಾರದಿಂದ ಘೋಷಣೆಯಾಗಿರುವ ಕಡಬ ಮತ್ತು ಮೂಡುಬಿದಿರೆ ತಾಲೂಕುಗಳನ್ನು ರಾಜ್ಯದ ಕಂದಾಯ ಸಚಿವರು ಮಾರ್ಚ್ ಒಂದರಂದು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅದೇ ದಿನ ಸಂಜೆ ಮಂಗಳೂರಿನಲ್ಲಿ ಕಂದಾಯ ಸಚಿವರಿಂದ ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಫೆ. 26ರಂದು ಲೇಡಿಗೋಶನ್ ನವೀಕೃತ ಆಸ್ಪತ್ರೆ ಕಟ್ಟಡ ಉದ್ಘಾಟನೆ :-

ನಗರದ ಲೇಡಿಗೋಶನ್ ಆಸ್ಪತ್ರೆಯ ನವೀಕೃತ ಕಟ್ಟಡದಲ್ಲಿ ಆಸ್ಪತ್ರೆ ಫೆ.26ರಂದು ಉದ್ಘಾಟನೆಗೊಳ್ಳಲಿದೆ. ಬಳಿಕ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ನವೀಕೃತ ಕಟ್ಟಡದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಚಿಕ್ಕ ಮಗಳೂರು ಕ್ಷೇತ್ರದ ಸಂಸದರು ಭಾಗವಹಿಸಲಿದ್ದಾರೆ ಎಂದು  ಖಾದರ್ ತಿಳಿಸಿದರು.

ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಹುತಾತ್ಮ ಯೋಧ ಗುರು ಕುಟುಂಬಕ್ಕೆ 2 ಲಕ್ಷ ರೂ. ಸಂಗ್ರಹ

ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ರಾಜ್ಯದ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ 2 ಲಕ್ಷ ರೂ. ಸಂಗ್ರಹಿಸಲಾಗಿದೆ. ಅದನ್ನು ಅವರ ನಿವಾಸಕ್ಕೆ ತೆರಳಿ ನೀಡಲು ನಿರ್ಧರಿಸಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಅಹವಾಲು ಸ್ವೀಕಾರ

ಜಿಲ್ಲೆಯಾದ್ಯಂತ ಜನರ ಕಂದಾಯ ಸಮಸ್ಯೆ ಹಾಗೂ ಅಹವಾಲು ಸ್ವೀಕರಿಸಲು ಅಭಿಯಾನ ಆರಂಭಿಸಲಾಗಿದೆ. ಫೆ. 20ರಂದು ಬೆಳಗ್ಗೆ ಸುಳ್ಯದಲ್ಲಿ ಸಂಜೆ ಪುತ್ತೂರು ಐಬಿ ಯಲ್ಲಿ ಜನರ ಅಹವಾಲು ಸ್ವೀಕರಿಸಲಾಗುವುದು. ಫೆ. 21ರಂದು ಬೆಳಗ್ಗೆ ಬೆಳ್ತಂಗಡಿ ಹಾಗೂ ಅಪರಾಹ್ನ ಬಂಟ್ವಾಳದಲ್ಲಿ ಪ್ರಗತಿ ಪರಿಶೀಲನೆ ಹಾಗೂ ಆಹವಾಲು ಸ್ವೀಕಾರ ನಡೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ಸಮಸ್ಯೆಯ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸರಕಾರ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಾಣಿಲ ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ

ಶ್ರೀಕ್ಷೇತ್ರ ಮಾಣಿಲಕ್ಕೆ ಧರ್ಮಸ್ಥಳ, ಸುಬ್ರಹ್ಮಣ್ಯ, ಪುತ್ತೂರು ಸಂಪರ್ಕಿಸುವಂತೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಿಸಲು ಕೆಎಸ್‌ಆರ್‌ಟಿಸಿಯಿಂದ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಅವರು ಹೇಳಿದರು.

ಫ್ಲೈ ಓವರ್ ಕಾಮಗಾರಿ ವಿಳಂಬಕ್ಕೆ ನಳಿನ್ ಹೇಳಿಕೆ ರಾಜಕೀಯ ಪ್ರೇರಿತ

ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪಂಪ್‌ವೆಲ್ -ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ವಿಳಂಬಕ್ಕೆ ಸಂಸದ ನಳಿನ್ ಕುಮಾರ್ ಹೇಳಿಕೆ ರಾಜಕೀಯ ಪ್ರೇರಿತ, ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಮಗಾರಿ ತ್ವರಿತವಾಗಿ ಆಗಬೇಕಾಗಿದ್ದರೆ ಎಷ್ಟು ಜನ ಬೇಕು, ಎಷ್ಟು ಯಂತ್ರ ಬೇಕು, ಯಾವ ರೀತಿ ಕಾಮಗಾರಿ ವೇಗವಾಗಿ ಆಗಬೇಕು ಎನ್ನುವ ವೀಕ್ಷಣೆ ಆಗಬೇಕಾಗಿತ್ತು. ಬೆರಳೆಣಿಕೆಯ ಜನರನ್ನು ಇಟ್ಟುಕೊಂಡು ಈ ಕಾಮಗಾರಿ ಹೇಗೆ ತ್ವರಿತವಾಗಲು ಸಾಧ್ಯ. ಕಾಮಗಾರಿಯನ್ನು ವೀಕ್ಷಿಸಿದ ಸಂಸದರಿಗೆ ಈ ಸಂಗತಿಗಳೇಕೆ ಅರ್ಥವಾಗಿಲ್ಲ ? ಎರಡೂ ಕಡೆ ರಾತ್ರಿ ಹಗಲು ತ್ವರಿತವಾಗಿ ಕಾಮಗಾರಿ ಆಗಬೇಕು ಎನ್ನುವ ನೆಲೆಯಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಸಂಸದರು ಖುದ್ದು ನಿಂತು ತ್ವರಿತವಾಗಿ ಕಾಮಗಾರಿ ನಡೆಸುವ ಜವಾಬ್ದಾರಿ ಏಕೆ ವಹಿಸಿಲ್ಲ ? ಇದಕ್ಕೆ ಯಾರು ಹೊಣೆ. ಕಾಮಗಾರಿ ಆರಂಭವಾಗಿ ಇಷ್ಟು ವರ್ಷ ಸಂಸದರು ಮೌನವಹಿಸಲು ಕಾರಣ ಏನು ಎನ್ನುವುದನ್ನು ಜನರಿಗೆ ತಿಳಿಸಲಿ.

ಶಿರಾಡಿ - ಬಿ.ಸಿ.ರೋಡ್ ರಸ್ತೆ, ಚಾರ್ಮಾಡಿ ಘಾಟಿ ಕಾಮಗಾರಿ, ಮೂಡಬಿದ್ರೆ- ನಂತೂರು ಹೆದ್ದಾರಿ ಕಾಮಗಾರಿ ಏಕೆ ವಿಳಂಬವಾಗಿದೆ. ಸಂಸದರಿಗೆ ತಮ್ಮ ಸಾಧನೆ ಏನು ಎನ್ನುವುದನ್ನು ಜನರಿಗೆ ತೋರಿಸಲು ಸಾಕ್ಷಿ ಇಲ್ಲದ ಕಾರಣ ಆರೋಪ ಮಾಡುತ್ತಿದ್ದಾರೆ. ಈಗ ಕಾಮಗಾರಿ ಪುರ್ಣಗೊಳಿಸಲು ಸಾಧ್ಯವಾಗದೆ ಇರುವುದಕ್ಕೆ ಸಂಸದರು ಹೇಳುವ ಸುಳ್ಳುಗಳನ್ನು ನಂಬಲು ಜಿಲ್ಲೆಯ ಜನರು ಮೂರ್ಖರಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹರೀಶ್ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News