ಉಪ್ಪಳ-ಮಂಗಳೂರು ಜೋಡಿ ರೈಲುಹಳಿ ನಿರ್ಮಾಣ: ಕುಲಶ್ರೇಷ್ಠ

Update: 2019-02-19 16:58 GMT

ಮಂಗಳೂರು, ಫೆ.19: ಉಪ್ಪಳದಿಂದ ಮಂಗಳೂರುವರೆಗೆ ಈಗಿರುವ ಸಿಂಗಲ್ ರೈಲುಹಳಿಯನ್ನು ಒಂದು ವರ್ಷದ ಅವಧಿಯಲ್ಲಿ ಜೋಡಿ ರೈಲುಹಳಿಯಾಗಿ ಪರಿವರ್ತಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಆರ್.ಕೆ. ಕುಲಶ್ರೇಷ್ಠ ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಮಕ್ಕಳ ಉದ್ಯಾನವನವನ್ನು ಉದ್ಘಾಟಿಸಿ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು. ಉಪ್ಪಳದಿಂದ ಮಂಗಳೂರುವರೆಗೆ ಜೋಡಿ ರೈಲು ಹಳಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿ ಜೋಡಿ ರೈಲುಹಳಿ ನಿರ್ಮಾಣ ಕಾರ್ಯ ಶುರುವಾಗಲಿದೆ. ಇದರಿಂದ ಮಂಗಳೂರು ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ ಎಂದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಕಡಿಮೆಯಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು. ರೈಲು ನಿಲ್ದಾಣದಲ್ಲಿ ಇಂಟರ್‌ಲಾಕ್ ಹಾಕುವ ಕಾಮಗಾರಿ ಚುರುಕು ಪಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಮಂಗಳವಾರ ಬೆಳಗ್ಗೆ ಕೇರಳದ ಕಣ್ಣೂರು ಸಮೀಪದ ಕಣ್ಣನೂರು, ಚಂದ್ರಗಿರಿ, ಕಾಸರಗೋಡು ರೈಲು ನಿಲ್ದಾಣಗಳಿಗೆ ಭೇಟಿ ನೀಡಿ, ಸದ್ಯ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಪರಿಶೀಲಿಸಲಾಗುತ್ತಿದೆ. ಮಂಗಳೂರು ರೈಲು ನಿಲ್ದಾಣದಲ್ಲಿ ಇಲಾಖೆಯಿಂದ ಒಳ್ಳೆಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಮಂಗಳೂರು ರೈಲ್ವೆ ಅಭಿವೃದ್ಧಿ ಹಾಗೂ ರೈಲುಗಳ ಸಮಯವನ್ನು ಮರುಪರಿಶೀಲಿಸಲು ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆಯ ಸುದರ್ಶನ್ ಹಾಗೂ ಜಿ.ಆರ್.ಭಟ್ ಅವರು ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಆರ್.ಕೆ. ಕುಲಶ್ರೇಷ್ಠ ಅವರಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News