ವಿಚಾರಣೆ ಮುಂದೂಡುವ ಪಾಕ್ ಕೋರಿಕೆಯನ್ನು ತಳ್ಳಿಹಾಕಿದ ಐಸಿಜೆ

Update: 2019-02-19 17:11 GMT

ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯ 2ನೇ ದಿನ

ಹೇಗ್ (ನೆದರ್‌ಲ್ಯಾಂಡ್ಸ್), ಫೆ. 19: ಅಂತರ್‌ರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಕ್ಕೆ ಪಾಕಿಸ್ತಾನದ ನೂತನ ಆ್ಯಡ್-ಹಾಕ್ ನ್ಯಾಯಾಧೀಶರ ನೇಮಕವಾಗುವವರೆಗೆ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂಬ ಪಾಕಿಸ್ತಾನದ ಮನವಿಯನ್ನು ಪುರಸ್ಕರಿಸಲು ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ.

ಭಾರತದ ಮಾಜಿ ನೌಕಾಪಡೆ ಅಧಿಕಾರಿ ಜಾಧವ್‌ಗೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ ಮನವಿಯ ವಿಚಾರಣೆ ಸೋಮವಾರದಿಂದ ನಾಲ್ಕು ದಿನಗಳ ಕಾಲ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಸೋಮವಾರ ಭಾರತ ತನ್ನ ವಾದ ಮಂಡಿಸಿದೆ.

ತನ್ನ ಆ್ಯಡ್-ಹಾಕ್ ನ್ಯಾಯಾಧೀಶರು ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂದು ಮಂಗಳವಾರ ತನ್ನ ವಾದ ಮಂಡಿಸಬೇಕಿರುವ ಪಾಕಿಸ್ತಾನ ನ್ಯಾಯಾಧೀಶರನ್ನು ಕೋರಿತು.

ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್, ‘‘ಆ್ಯಡ್-ಹಾಕ್ ನ್ಯಾಯಾಧೀಶರೊಬ್ಬರನ್ನು ನೇಮಿಸಲು ನಮಗೆ ನೀಡಲಾಗಿರುವ ಹಕ್ಕನ್ನು ಚಲಾಯಿಸಿದ್ದೇವೆ. ಆದರೆ, ನಮ್ಮ ನ್ಯಾಯಾಧೀಶರು ಈಗ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ನ್ಯಾಯಾಲಯವು ಇನ್ನೊಬ್ಬ ನ್ಯಾಯಾಧೀಶರನ್ನು ಪೀಠಕ್ಕೆ ಸೇರಿಸಿಕೊಳ್ಳಬೇಕು ಹಾಗೂ ವಾದ ಮಂಡನೆಯನ್ನು ಮುಂದುವರಿಸುವ ಮುನ್ನ ಕಲಾಪಗಳ ಬಗ್ಗೆ ಅಧ್ಯಯನ ನಡೆಸಲು ಅವರಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು ಎಂಬುದಾಗಿ ಪಾಕಿಸ್ತಾನ ಈ ನ್ಯಾಯಾಲಯಕ್ಕೆ ಮನವಿ ಮಾಡುತ್ತದೆ’’ ಎಂದು ವಿಚಾರಣೆಯ ಆರಂಭದಲ್ಲಿ ಹೇಳಿದರು.

ಆದರೆ, ಜಾಗತಿಕ ನ್ಯಾಯಾಲಯವು ಪಾಕಿಸ್ತಾನದ ಕೋರಿಕೆಯನ್ನು ತಳ್ಳಿಹಾಕಿತು ಹಾಗೂ ಆ್ಯಡ್-ಹಾಕ್ ನ್ಯಾಯಾಧೀಶರ ಅನುಪಸ್ಥಿತಿಯಲ್ಲೇ ವಾದ ಮುಂದುವರಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News