ಸಿದ್ಧಾಂತ ಬಿಂಬಗಳ ಕಳವು ಪ್ರಕರಣ: ಆರೋಪಿ ಸಂತೋಷ್ ದಾಸ್ ನ್ಯಾಯಾಲಯಕ್ಕೆ ಹಾಜರು

Update: 2019-02-19 17:14 GMT

ಮೂಡುಬಿದಿರೆ, ಫೆ. 19: ಇಲ್ಲಿನ ಗುರು ಬಸದಿಯ ಸಿದ್ಧಾಂತ ಮಂದಿರದ ವಿಗ್ರಹ ಕಳವು ಪ್ರಕರಣದ ಪ್ರಮುಖ ಆರೋಪಿ ಸಂತೋಷ್‍ ದಾಸ್‍ನನ್ನು (ಘನಶ್ಯಾಮ್) ಮಂಗಳೂರು ಉತ್ತರ ಠಾಣೆಯ ಹಾಗೂ ಮೂಡುಬಿದಿರೆ ಠಾಣೆ ಪೋಲಿಸರು ಬಾಡಿ ವಾರೆಂಟ್ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಸಿದ್ಧಾಂತ ಮಂದಿರದಿಂದ ಕೋಟ್ಯಾಂತರ ಬೆಲೆಬಾಳುವ ವಿಗ್ರಹಗಳನ್ನು 2013ರ ಜುಲೈ 6ರಂದು ಆರೋಪಿ ಸಂತೋಷ್ ದಾಸ್ ಕಳುವುಗೈದಿದ್ದ ಎನ್ನಲಾಗಿದ್ದು, ಪೊಲೀಸರು ಕೆಲವೇ ತಿಂಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿದ್ದರು. ಸಂತೋಷ್‍ದಾಸ್  ಪತ್ನಿ ದೀಪ್ತಿ ಮೊಹಂತಿ ಪಟ್ನಾಯಕ್, ಮಾವ ದಿಗಂಬರ ಮೊಹಂತಿ, ವಜ್ರ ವ್ಯಾಪಾರಿ ರಾಜಾಜಿ ರನ್ನು ಬಂಧಿಸಲಾಗಿತ್ತು.

ಸಂತೋಷ್‍ದಾಸ್ ಕೂಡ ಒಟ್ಟು 23 ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಉಳಿದ ಆರೋಪಿಗಳು ಕೂಡ ಜಾಮೀನು ಪಡೆದು ಹೊರಬಂದಿದ್ದಾರೆ. ಆ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದು, ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಈತ ತಮಿಳುನಾಡಿನ ದೇವಸ್ಥಾನ ಒಂದರಲ್ಲಿ ಕಳವು ಕೃತ್ಯಕ್ಕೆ ಸಂಬಂಧಿಸಿದಂತೆ ಸೇಲಂ ಪೊಲೀಸರಿಂದ ಬಂಧಿತನಾಗಿದ್ದ. ಹೀಗಾಗಿ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ಪೊಲೀಸರು ಸೇಲಂ ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಪಡೆದು ಸಂತೋಷ್‍ದಾಸ್‍ನನ್ನು ಮಂಗಳೂರಿಗೆ ಕರೆತಂದು ಸೋಮವಾರ ಮಂಗಳೂರಿನ ನ್ಯಾಯಾಲಯಕ್ಕೆ ಮತ್ತು ನಿನ್ನೆ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಂತೋಷ್‍ದಾಸ್ ನ್ಯಾಯಾಲಯದ ವಿಚಾರಣೆಗೆ ಗೈರಾಗಿರುವುದರಿಂದ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಸದ್ಯ ಆತ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕರ್ನಾಟಕದಲ್ಲಿ ಆತನ ಮೇಲೆ ಒಟ್ಟು 23 ಕಳ್ಳತನ ಪ್ರಕರಣಗಳಿದ್ದು, ಎಲ್ಲಾ ಪ್ರಕರಣದಲ್ಲೂ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಸದ್ಯ ವಾರೆಂಟ್ ಮೂಲಕ ಪೊಲೀಸರು ಸೇಲಂ ಜೈಲಿನಿಂದ ಆತನನ್ನು ಇಲ್ಲಿನ ನ್ಯಾಯಾಲಯಗಳಿಗೆ ಹಾಜರು ಪಡಿಸಿದ್ದು, ಮುಂದಿನ ದಿನದಲ್ಲಿ ಮತ್ತೆ ಜಾಮೀನು ಅರ್ಜಿ ಸಲ್ಲಿಸಲಾಗುವುದು ಆರೋಪಿ ಪರ ವಕೀಲ ನಾಗೇಶ್ ಶೆಟ್ಟಿ ಡಿ. ಮಾಧ್ಯಮದವರಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News