ವಿಚಾರಣೆ ವೇಳೆ ಹೃದಯಾಘಾತಕ್ಕೊಳಗಾದ ನ್ಯಾಯಾಧೀಶ

Update: 2019-02-19 17:22 GMT

ಇಸ್ಲಾಮಾಬಾದ್, ಫೆ. 19: ನೆದರ್‌ಲ್ಯಾಂಡ್ಸ್ ರಾಜಧಾನಿ ಹೇಗ್‌ ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಮವಾರ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಪಾಕಿಸ್ತಾನದ ನ್ಯಾಯಾಧೀಶರೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಯೊಂದು ಹೇಳಿದೆ.

69 ವರ್ಷದ ತಸ್ಸಾದುಖ್ ಹುಸೈನ್ ಗಿಲಾನಿ ಅವರನ್ನು ಈ ನಿರ್ದಿಷ್ಟ ಪ್ರಕರಣದವ ವಿಚಾರಣೆಗಾಗಿ ನ್ಯಾಯಾಲಯಕ್ಕೆ ನೇಮಿಸಲಾಗಿತ್ತು.

ಹೃದಯಾಘಾತಕ್ಕೆ ಒಳಗಾದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ, ಆದಾಗ್ಯೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ‘ಅಬ್ ತಕ್ ನ್ಯೂಸ್’ ವರದಿ ಮಾಡಿದೆ.

ಭಾರತದ ಮಾಜಿ ನೌಕಾಪಡೆ ಅಧಿಕಾರಿಗೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ ಮನವಿಯ ವಿಚಾರಣೆ ಸೋಮವಾರದಿಂದ ನಾಲ್ಕು ದಿನಗಳ ಕಾಲ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಪ್ರಕರಣಕ್ಕೆ ಸಂಬಂಧಪಟ್ಟ ದೇಶವೊಂದರ ನ್ಯಾಯಾಧೀಶರು ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠದಲ್ಲಿ ಇಲ್ಲದಿದ್ದರೆ, ನಿರ್ದಿಷ್ಟ ಪ್ರಕರಣದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಆ ದೇಶವು ವ್ಯಕ್ತಿಯೊಬ್ಬರನ್ನು ಆರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News