ಆಕ್ರಮಣ ನಡೆಸಿದರೆ, ಪ್ರತ್ಯಾಕ್ರಮಣ: ಇಮ್ರಾನ್ ಖಾನ್

Update: 2019-02-19 17:26 GMT

ಇಸ್ಲಾಮಾಬಾದ್, ಫೆ. 19: ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಸೈನಿಕರ ವಾಹನಗಳ ಮೇಲೆ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಭಾರತಕ್ಕೆ ನೆರವು ನೀಡಲು ಪಾಕಿಸ್ತಾನ ಸಿದ್ಧವಿದೆ, ಆದರೆ, ಭಾರತ ದಾಳಿ ನಡೆಸಿದರೆ ಅದರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

‘‘ಪ್ರತೀಕಾರ ನಡೆಸಬೇಕೆಂದು ಭಾರತ ಯೋಚಿಸುವುದು ಮಾತ್ರವಲ್ಲ, ಪ್ರತೀಕಾರ ಮಾಡುತ್ತದೆ’’ ಎಂದು ದೇಶವನ್ನುದ್ದೇಶಿಸಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಶಾಮೀಲಾತಿ ಬಗ್ಗೆ ಪುರಾವೆ ನೀಡುವಂತೆ ಅವರು ಭಾರತಕ್ಕೆ ಕರೆ ನೀಡಿದರು.

ಸಿಆರ್‌ಪಿಎಫ್ ಯೋಧರ ವಾಹನಗಳ ಸಾಲಿನ ಮೇಲೆ ಗುರುವಾರ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳಿಂದ ತುಂಬಿದ್ದ ಕಾರನ್ನು ನುಗ್ಗಿಸಿ ಕಾರನ್ನು ಸ್ಫೋಟಿಸಿದಾಗ ಕನಿಷ್ಠ 40 ಸೈನಿಕರು ಹುತಾತ್ಮರಾಗಿದ್ದಾರೆ.

‘‘ಯಾವುದೇ ಪುರಾವೆಯಿಲ್ಲದೆ ನೀವು ಪಾಕಿಸ್ತಾನ ಸರಕಾರದ ಮೇಲೆ ಆರೋಪ ಹೊರಿಸಿದ್ದೀರಿ. ನಿಮ್ಮಲ್ಲಿ ಯಾವುದಾದರೂ ಪುರಾವೆಯಿದ್ದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ಇಮ್ರಾನ್ ಖಾನ್ ಹೇಳಿದರು.

‘‘ನಮ್ಮ ನೆಲದಿಂದ ಹಿಂಸೆಯನ್ನು ಹರಡದಿರುವುದು ನಮಗೇ ಒಳ್ಳೆಯದು. ಪಾಕಿಸ್ತಾನದ ಯಾವುದೇ ವ್ಯಕ್ತಿಯ ವಿರುದ್ಧ ಪುರಾವೆ ಲಭಿಸಿದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಾನು ಭಾರತ ಸರಕಾರಕ್ಕೆ ಹೇಳಬಯಸುತ್ತೇನೆ’’ ಎಂದರು.

‘‘ಪಾಕಿಸ್ತಾನಕ್ಕೆ ಇದರಿಂದ ಏನು ಸಿಗುತ್ತದೆ? ಪಾಕಿಸ್ತಾನವು ಸ್ಥಿರತೆಯೆಡೆಗೆ ಸಾಗುತ್ತಿರುವಾದ ಇದನ್ನು ಯಾಕೆ ಮಾಡುತ್ತದೆ?’’ ಎಂದು ಹೇಳಿದ ಅವರು, ‘‘ಇದು ಹೊಸ ಮನೋಭಾವದ ನಯಾ ಪಾಕಿಸ್ತಾನ’’ ಎಂದರು.

ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗೆ ಪಾಕ್ ಮನವಿ

ಇದಕ್ಕೂ ಮೊದಲು, ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ತುರ್ತಾಗಿ ಮಧ್ಯ ಪ್ರವೇಶಿಸುವಂತೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯನ್ನು ಪಾಕಿಸ್ತಾನ ಒತ್ತಾಯಿಸಿದೆ.

‘‘ಪಾಕಿಸ್ತಾನದ ವಿರುದ್ಧ ಬಲಪ್ರಯೋಗಿಸುವ ಭಾರತದ ಬೆದರಿಕೆಯ ಹಿನ್ನೆಲೆಯಲ್ಲಿ ನಮ್ಮ ವಲಯದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯತ್ತ ತುರ್ತು ಗಮನ ಹರಿಸುವಂತೆ ನಾನು ಕೋರುತ್ತಿದ್ದೇನೆ’’ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಆಂಟೋನಿಯೊ ಗುಟೆರಸ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News