ಸಾಕ್ಷ್ಯವಿದ್ದರೆ ಪುಲ್ವಾಮಾ ದಾಳಿಯ ತನಿಖೆ ನಡೆಸುವ ಪಾಕ್ ಹೇಳಿಕೆ ‘ಕುಂಟು ನೆಪ’: ಭಾರತ

Update: 2019-02-19 17:30 GMT

ಹೊಸದಿಲ್ಲಿ,ಫೆ.19: 40 ಸಿಆರ್‌ಪಿಎಫ್ ಸಿಬ್ಬಂದಿ ಕೊಲ್ಲಲ್ಪಟ್ಟಿರುವ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದಾರೆ ಎಂದು ಭಾರತವು ಮಂಗಳವಾರ ಹೇಳಿದೆ. ಖಾನ್ ಮಂಗಳವಾರದ ತನ್ನ ಭಾಷಣದಲ್ಲಿ ಮೃತ ಯೋಧರ ಕುಟುಂಬಗಳಿಗೆ ಸಂತಾಪಗಳನ್ನೂ ವ್ಯಕ್ತಪಡಿಸಿರಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಭಾರತದಿಂದ ಸಾಕ್ಷ್ಯಾಧಾರಗಳನ್ನು ಕೇಳಿರುವ ಖಾನ್ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತಿದ್ದನ್ನು ಕಡೆಗಣಿಸಿದ್ದಾರೆ. ಜೈಶೆ ಮುಹಮ್ಮದ್ ಮತ್ತು ಅದರ ನಾಯಕ ಮಸೂದ್ ಅಝರ್‌ಗೆ ಪಾಕಿಸ್ತಾನವೇ ನೆಲೆಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದಿರುವ ಸಚಿವಾಲಯವು, ಪಾಕಿಸ್ತಾನವು ಕ್ರಮವನ್ನು ಕೈಗೊಳ್ಳಲು ಈ ಸಾಕ್ಷಾಧಾರಗಳು ಸಾಕು ಎಂದಿದೆ.

ಸಾಕ್ಷ್ಯವನ್ನು ಒದಗಿಸಿದರೆ ಪುಲ್ವಾಮಾ ದಾಳಿಯ ಬಗ್ಗೆ ಪಾಕಿಸ್ತಾನವು ತನಿಖೆಯನ್ನು ನಡೆಸುತ್ತದೆ ಎಂಬ ಖಾನ್ ಹೇಳಿಕೆಯು ಕುಂಟುನೆಪವಾಗಿದೆ ಎಂದಿರುವ ಸರಕಾರವು,26/11ರ ಮುಂಬೈ ಮತ್ತು ಪಠಾಣ್ ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ದಾಳಿಗಳ ಬಗ್ಗೆ ಪಾಕಿಸ್ತಾನಕ್ಕೆ ಸಾಕ್ಷಗಳನ್ನು ಒದಗಿಸಿದ್ದರೂ ತನಿಖೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎನ್ನುವುದನ್ನು ಬೆಟ್ಟು ಮಾಡಿದೆ. ಪಾಕಿಸ್ತಾನದ ಹಿಂದಿನ ದಾಖಲೆಯನ್ನು ಪರಿಗಣಿಸಿದರೆ ಅದರ ‘ಖಚಿತ ಕ್ರಮ’ದ ಭರವಸೆಗಳೆಲ್ಲ ಪೊಳ್ಳಾಗಿವೆ ಎಂದಿದೆ.

 ಪಾಕಿಸ್ತಾನವು ಭಯೋತ್ಪಾದನೆಯ ಅತಿದೊಡ್ಡ ಬಲಿಪಶುವಾಗಿದೆ ಎಂಬ ಖಾನ್ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಇದು ಸತ್ಯಕ್ಕೆ ದೂರವಾಗಿದೆ. ಪಾಕಿಸ್ಥಾನವು ಭೀತಿವಾದದ ಕೇಂದ್ರಬಿಂದು ಎಂಬ ವಾಸ್ತವ ಅಂತರರಾಷ್ಟ್ರೀಯ ಸಮುದಾಯಕ್ಕೆ ಚೆನ್ನಾಗಿ ತಿಳಿದಿದೆ. ಖಾನ್ ಅವರ ‘ನಯಾ ಪಾಕಿಸ್ತಾನ’ ಪ್ರಸ್ತಾವವು ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟಿರುವ ಹಫೀಝ್ ಸಯೀದ್‌ನಂತಹ ಭಯೋತ್ಪಾದಕರೊಂದಿಗೆೆ ಸಚಿವರು ವೇದಿಕೆಗಳನ್ನು ಹಂಚಿಕೊಳ್ಳುವ ದೇಶವನ್ನು ಉದ್ದೇಶಿಸಿದೆ ಎಂದು ಹೇಳಿದೆ.

ಖಾನ್ ಅವರ ಮಾತುಕತೆಯ ಕೊಡುಗೆಯನ್ನೂ ಪ್ರಸ್ತಾಪಿಸಿರುವ ಸಚಿವಾಲಯವು,ಸಮಗ್ರ ದ್ವಿಪಕ್ಷೆಯ ಮಾತುಕತೆಗಳಿಗೆ ಭಾರತವು ಸದಾ ಸಿದ್ಧವಾಗಿದೆ,ಆದರೆ ಈ ಮಾತುಕತೆಗಳು ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತ ವಾತಾವರಣದಲ್ಲಿ ನಡೆಯಬೇಕು ಎಂದಿದೆ.

ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಂದ ನಿರ್ಧರಿಸಲ್ಪಟ್ಟಿದೆ ಎಂದು ಪಾಕ್ ಪ್ರಧಾನಿ ಪರೋಕ್ಷವಾಗಿ ಸೂಚಿಸಿರುವುದು ವಿಷಾದನೀಯ ಎಂದಿರುವ ಸಚಿವಾಲಯವು,ಭಾರತವು ಈ ಸುಳ್ಳು ಆರೋಪವನ್ನು ತಿರಸ್ಕರಿಸುತ್ತದೆ. ಭಾರತದ ಪ್ರಜಾಪ್ರಭುತ್ವವು ವಿಶ್ವಕ್ಕೆ ಮಾದರಿಯಾಗಿದೆ ಮತ್ತು ಪಾಕಿಸ್ತಾನವು ಅದನ್ನೆಂದಿಗೂ ಅರ್ಥ ಮಾಡಿಕೊಳ್ಳದು ಎಂದು ಹೇಳಿದೆ.

ಪುಲ್ವಾಮಾ ದಾಳಿಯ ರೂವಾರಿಗಳು ಮತ್ತು ತನ್ನ ನಿಯಂತ್ರಣದ ಪ್ರದೇಶಗಳಿಂದ ಕಾರ್ಯಾಚರಿಸುತ್ತಿರುವ ಇತರ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ವಿಶ್ವಾಸಾರ್ಹ ಮತ್ತು ಎದ್ದು ಕಾಣುವ ಕ್ರಮವನ್ನು ಕೈಗೊಳ್ಳುವಂತೆ ಭಾರತವು ಪಾಕಿಸ್ತಾನವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News