ಹೊಸ ಡಿಜಿಟಲ್ ವಂಚನೆ ವಿರುದ್ಧ ಗ್ರಾಹಕರಿಗೆ ಎನ್‌ಪಿಸಿಐ ಎಚ್ಚರಿಕೆ

Update: 2019-02-19 17:30 GMT

ಮಂಗಳೂರು, ಫೆ.19: ‘ರಿಮೋಟ್ ಸ್ಕ್ರೀನ್ ಆಕ್ಸೆಸ್’ ಎಂಬ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ವಂಚಿಸುವ ಹೊಸ ವಿಧಾನ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಲಹೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈ ವಿನೂತನ ವಂಚನಾ ಕ್ರಮದ ಕಾರ್ಯವೈಖರಿ ಬಗ್ಗೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ಗ್ರಾಹಕ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐ ಜತೆ ಎನ್‌ಪಿಸಿಐ ಕೈಜೋಡಿಸಲಿದೆ ಎಂದು ರಿಸ್ಕ್ ನಿರ್ವಹಣೆ ವಿಭಾಗದ ಮುಖ್ಯಸ್ಥ ಭರತ್ ಪಾಂಚಾಲ್ ಹೇಳಿದ್ದಾರೆ.

ವಂಚಕರು ‘ಎನಿ ಡೆಸ್ಕ್’ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಆಮಿಷಗಳನ್ನು ಒಡ್ಡಿ, ಅದರ ಮೂಲಕ ವಂಚಿಸುತ್ತಿರುವ ಐದು ಪ್ರಕರಣಗಳು ಈ ವರೆಗೆ ಬೆಳಕಿಗೆ ಬಂದಿದ್ದು, ಇದು ವ್ಯಾಪಕವಾಗುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಈ ವಿಧಾನವನ್ನು ಗ್ರಾಹಕರ ಮೊಬೈಲ್ ಸಾಧನಗಳಲ್ಲಿ ಎಲ್ಲ ಅಪ್ಲಿಕೇಶನ್‌ಗಳಿಗೆ (ಪಾವತಿ/ಬ್ಯಾಂಕಿಂಗ್/ವ್ಯಾಲೆಟ್‌ಗಳು/ಸಾಮಾಜಿಕ ಜಾಲತಾಣ) ಬಳಸಬಹುದಾಗಿದೆ. ಒಮ್ಮೆ ಸಂತ್ರಸ್ತ ಗ್ರಾಹಕ ಅನುಮತಿಯನ್ನು ಮಂಜೂರು ಮಾಡಿದರೆ, ವಂಚಕರು ಸಂತ್ರಸ್ತ ವ್ಯಕ್ತಿಯ ಫೋನ್ ಬಳಸಿಕೊಂಡು ಕೇವಲ ಹಣಕಾಸು ವ್ಯವಹಾರವನ್ನು ಆರಂಭಿಸಲು ಅನುವಾಗುವುದು ಮಾತ್ರವಲ್ಲದೇ, ಆನ್‌ಲೈನ್ ಶಾಪಿಂಗ್ ಆರ್ಡರ್ ಮಾಡಲು, ರೈಲು/ ವಿಮಾನ ಟಿಕೆಟ್ ಕಾಯ್ದಿರಿಸಲು ಕೂಡ ಆರಂಭಿಸಬಹುದಾಗಿದೆ. ಇದರೊಂದಿಗೆ ಮೊಬೈಲ್‌ನಲ್ಲಿ ದಾಸ್ತಾನು ಇರುವ ಮಾಹಿತಿಗಳನ್ನು ಕೂಡ ಕದಿಯಬಹುದಾಗಿದೆ ಎಂದು ವಿವರಿಸಿದ್ದಾರೆ.

ಗ್ರಾಹಕರು ತಮ್ಮ ಖಾತೆ/ ಕಾರ್ಡ್ ಮಾಹಿತಿಗಳು, ಒಟಿಪಿ/ಪಿನ್ ಮತ್ತು/ ಅಥವಾ ಅನಧಿಕೃತ ವ್ಯಕ್ತಿಗಳಿಗೆ ತಮ್ಮ ಮೊಬೈಲ್ ಸಾಧನವನ್ನು ಇಂಥ ರಿಮೋಟ್ ಸ್ಕ್ರೀನ್ ಆಕ್ಸೆಸ್ ಆ್ಯಪ್‌ಗಳ ಮೂಲಕ ಬಳಸಲು ಅನುಮತಿ ನೀಡದಂತೆ ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News