ಪುಲ್ವಾಮ ದಾಳಿಯ 100 ಗಂಟೆ ಒಳಗೆ ಜೆಇಎಂ ನಾಯಕನ ಹತ್ಯೆ: ಸೇನೆ

Update: 2019-02-19 17:35 GMT

ಹೊಸದಿಲ್ಲಿ, ಫೆ. 19: ಪುಲ್ವಾಮ ಭಯೋತ್ಪಾದಕ ದಾಳಿ ನಡೆದ 100 ಗಂಟೆಗಳ ಒಳಗೆ ಪಾಕಿಸ್ತಾನದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು, ಕಾಶ್ಮೀರ ಕಣಿವೆಯಲ್ಲಿ ನಿರ್ವಹಿಸುತ್ತಿರುವ ಜೈಶೆ ಮುಹಮ್ಮದ್‌ನ ನಾಯಕನನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ಸೇನೆಯ ಚಿನ್ನಾರ್ ಕಾರ್ಪ್ಸ್‌ನ ಕಾರ್ಪ್ಸ್ ಕಮಾಂಡರ್ ಜೀತ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ.

ಪುಲ್ವಾಮದಲ್ಲಿ ಫೆಬ್ರವರಿ 14ರಂದು ನಡೆದ ಕಾರು ಬಾಂಬ್ ದಾಳಿಯ ಮಾದರಿ ಕಾಶ್ಮೀರದಲ್ಲಿ ದೀರ್ಘ ಸಮಯದ ಬಳಿಕ ನಡೆದಿದೆ. ಈ ರೀತಿಯ ದಾಳಿಗಳನ್ನು ನಿಭಾಯಿಸಲು ನಾವು ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇರಿಸಿದ್ದೇವೆ ಎಂದು ಅವರು ಹೇಳಿದರು.

ಯಾರಾದರೂ ಗನ್ ಎತ್ತಿಕೊಂಡರೆ ಅವರನ್ನು ಕೊಂದು ಹಾಕಲಾಗುವುದು. ಬಳಸಲಾದ ಸ್ಫೋಟಕದ ಮಾದರಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ, ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದರು.

ಕಾಶ್ಮೀರಿ ಸಮಾಜದಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ. ಭಯೋತ್ಪಾದಕ ಸಂಘಟನೆಗೆ ಸೇರಿದ ನಿಮ್ಮ ಮಕ್ಕಳು ಶರಣಾಗುವಂತೆ ಮನವಿ ಮಾಡಿ ಎಂದು ಕಾಶ್ಮೀರದ ಎಲ್ಲ ತಾಯಂದಿರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಶರಣಾಗತರಾಗದೆ ಯಾರಾದರೂ ಗನ್ ಎತ್ತಿಕೊಂಡರೆ ಕೊಂದು ಹಾಕಲಾಗುವುದು ಎಂದು ಧಿಲ್ಲೋನ್ ಎಚ್ಚರಿಸಿದ್ದಾರೆ.

 ಭಯೋತ್ಪಾದನಾ ನಿಗ್ರಹ ನಮ್ಮ ಗುರಿಯಾಗಿದೆ. ಯಾರಾದರೂ ಗನ್ ಹಿಡಿದುಕೊಂಡು ಕಾಶ್ಮೀರ ಕಣಿವೆ ಪ್ರವೇಶಿಸಿದರೆ, ಹಿಂದೆ ಹೋಗಲು ಬಿಡಲಾರೆವು ಎಂದು ಸ್ಪಷ್ಟವಾಗಿ ಹೇಳುತ್ತೇವೆ. ದಾಳಿಯಲ್ಲಿ ಪಾಕಿಸ್ತಾನದ ಸೇನೆ ಹಾಗೂ ಐಎಸ್‌ಐ ಭಾಗಿಯಾಗಿದೆ. ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಪಾಕಿಸ್ತಾನ ಸೇನೆಯ ಕೂಸು ಎಂದು ಧಿಲ್ಲೋನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News