×
Ad

ವಿದ್ಯುತ್ ಅವಘಡ: ಮನೆಗೆ ಬೆಂಕಿ; ಅಪಾರ ನಷ್ಟ

Update: 2019-02-19 23:15 IST

ವಿಟ್ಲ, ಫೆ. 19: ಫ್ಯಾನ್ ನಿಂದ ಬೆಂಕಿ ಉಂಡೆ ಮಂಚಕ್ಕೆ ಬಿದ್ದು ಮನೆಯೊಳಗೆ ಬೆಂಕಿ ಆವರಿಸಿಕೊಂಡು ಸಾಮಗ್ರಿಗಳು ಸುಟ್ಟು ಭಸ್ಮವಾಗಿದ್ದೂ ಅಲ್ಲದೆ ವಿದ್ಯುತ್ ಶಾಕ್ ಗೆ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲಪಡ್ನೂರು ಗ್ರಾಮದ ಕುಕ್ಕಿಲ ಎಂಬಲ್ಲಿ ಮಂಗಳವಾರ ನಡೆದಿದೆ.

ಪಂಜಿಗದ್ದೆ ರಮೇಶ್ಚಂದ್ರ, ಅವರ ಪತ್ನಿ ಗೀತಾ, ಪುತ್ರ ಅಭಿಷೇಕ್ ಗಾಯಗೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಮಲಗಿದ್ದ ಸಮಯ ಕೋಣೆಯಲ್ಲಿ ಫ್ಯಾನ್‍ನಿಂದ ಏಕಾಏಕಿ ಬೆಂಕಿ ಉಂಡೆ ಹಾಸಿಗೆಗೆ ಬಿದ್ದಿದೆ. ಇದರಿಂದ ಎಚ್ಚರಗೊಂಡ ಅವರು ತತ್‍ಕ್ಷಣ ಮನೆಯ ಹೊರಗೆ ಓಡಿ ಬಂದಿದ್ದಾರೆ. ಹಾಸಿಗೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಎರಡು ಮೂರು ಕೋಣೆಗಳ ವೈಯರಿಂಗ್ ಸುಟ್ಟು ಕರಕಲಾಗಿದೆ.

ಪ್ಯಾನ್ ನಿಂದ ಬೆಂಕಿ ಬಿದ್ದ ಕಾರಣ ವಿದ್ಯುತ್ ಸ್ಥಗಿತ ಮಾಡುವ ನಿಟ್ಟಿನಲ್ಲಿ ಮೈನ್ ಸ್ವಿಚ್ ಸಮೀಪ ಹೋದ ಗೀತಾ ಅವರಿಗೆ ವಿದ್ಯುತ್ ಶಾಕ್ ಹೊಡೆದಿದ್ದೂ ಅಲ್ಲದೆ, ಬೆಂಕಿಯ ತೀವ್ರತೆಗೆ ಅಲ್ಲೇ ಪಕ್ಕದಲ್ಲಿದ್ದ ಕಿಟಕಿ ಗಾಜು ಒಡೆದು ಕೈಗೆ ಹಾಗೂ ಕಾಲಿಗೆ ಗಂಭೀರ ಗಾಯಗೊಂದ್ದಾರೆ. ಈ ಸಂದರ್ಭ ಅವರನ್ನು ರಕ್ಷಿಸಲು ಹೋದ ರಮೇಶ್ಚಂದ್ರ ಅವರಿಗೂ ತೀವ್ರ ತರದ ಗಾಯಗಳಾಗಿದೆ. 

ಗಂಭೀರವಾಗಿ ಗಾಯಗೊಂಡ ರಮೇಶ್ಚಂದ್ರ ಮತ್ತು ಗೀತಾ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News