ರಾಸ್ ಟೇಲರ್ ನ್ಯೂಝಿಲೆಂಡ್‌ನ ಗರಿಷ್ಠ ರನ್ ಸ್ಕೋರರ್

Update: 2019-02-20 04:44 GMT

ಡುನೆಡಿನ್, ಫೆ.20: ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್ ನ್ಯೂಝಿಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ದಾಖಲೆಯನ್ನು ಮುರಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೇಲರ್ ಈ ಸಾಧನೆ ಮಾಡಿದ್ದಾರೆ.

ಬಾಂಗ್ಲಾ ವಿರುದ್ಧ 69 ರನ್ ಗಳಿಸಿದ ಟೇಲರ್ ಒಟ್ಟು 8,007 ರನ್ ಗಳಿಸಿ ಕಿವೀಸ್ ಪರ ಗರಿಷ್ಠ ರನ್ ಗಳಿಸಿದ್ದ ಫ್ಲೆಮಿಂಗ್ ದಾಖಲೆಯನ್ನು ಹಿಂದಿಕ್ಕಿದರು. ಏಕದಿನ ಕ್ರಿಕೆಟ್‌ನಲ್ಲಿ 8,000ಕ್ಕೂ ಅಧಿಕ ರನ್ ಗಳಿಸಿದ ಟೇಲರ್ ಅವರು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಸೌರವ್ ಗಂಗುಲಿ ಬಳಿಕ ವೇಗವಾಗಿ 8 ಸಾವಿರ ರನ್ ಪೂರೈಸಿದ ವಿಶ್ವದ ನಾಲ್ಕನೇ ದಾಂಡಿಗನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ನ್ಯೂಝಿಲೆಂಡ್ ಪರ ಗರಿಷ್ಠ ರನ್ ಗಳಿಸಿದ ಅಗ್ರ-ಐವರು ದಾಂಡಿಗರ ಪಟ್ಟಿಯಲ್ಲಿ ಟೇಲರ್, ಫ್ಲೆಮಿಂಗ್, ನಥಾನ್ ಅಸ್ಟ್ಲೇ(7,090), ಮಾರ್ಟಿನ್ ಗಪ್ಟಿಲ್(6,440) ಹಾಗೂ ಬ್ರೆಂಡನ್ ಮೆಕಲಂ(6,083)ಅವರಿದ್ದಾರೆ.

ತನ್ನ ದೇಶದ ಪರ ಈಗಾಗಲೇ ಗರಿಷ್ಠ ಏಕದಿನ ಶತಕ ಹಾಗೂ ಅರ್ಧಶತಕಗಳನ್ನು ಸಿಡಿಸಿದ ಸಾಧನೆ ಮಾಡಿರುವ ಟೇಲರ್ ಇದೀಗ ನ್ಯೂಝಿಲೆಂಡ್‌ನ ಶ್ರೇಷ್ಠ ದಾಂಡಿಗನಾಗಿ ಹೊರಹೊಮ್ಮಿದ್ದಾರೆ.

‘‘ನಾನು ಮೈಲುಗಲ್ಲು ಕ್ರಮಿಸಿದಾಗ ಪ್ರೇಕ್ಷಕರ ಈ ರೀತಿಯ ಸ್ವಾಗತಕ್ಕೆ ಹೃದಯ ತುಂಬಿ ಬರುತ್ತಿದೆ’’ ಎಂದು ಟೇಲರ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News