ಒಗ್ಗೂಡಿ ಕಾರ್ಯನಿರ್ವಹಿಸಿದರೆ ಸಾಮಾಜಿಕ ನ್ಯಾಯ: ವಿವೇಕಾನಂದ ಪಂಡಿತ್

Update: 2019-02-20 12:01 GMT

ಉಡುಪಿ, ಫೆ. 20: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾರಂಗ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ಪಾರದರ್ಶಕವಾಗಿ ರಬೇಕು. ಯಾವುದೇ ಬಾಹ್ಯ ಶಕ್ತಿಗಳ ಪ್ರೇರಣೆಗೆ ಒಳಗಾಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಿರಬೇಕು ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಪಂಡಿತ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸ ಲಾದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಡತನ ನಿರ್ಮೂಲನೆ, ನಿರುದ್ಯೋಗ, ಲಿಂಗ ತಾರತಮ್ಯ, ಮಾನವ ಹಕ್ಕು ಗಳ ಉಲ್ಲಂಘನೆ ಆಗದಂತೆ ತಡೆಗಟ್ಟುವ ಉದ್ದೇಶದಿಂದ ಸಾಮಾಜಿಕ ನ್ಯಾಯ ದಿನಾಚರಣೆಯಯನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನದ ಪ್ರಸ್ತಾವನೆ ಯಲ್ಲಿ ತಿಳಿಸಿರುವಂತೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಗಳನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು. ಕೇವಲ ಭಾರತೀಯರಿಗೆ ಮಾತ್ರ ಆಗಿರದೆ ಹೊರಗಿನಿಂದ ಬರುವವರಿಗೂ ಒದಗಿಸಿಕೊಡುವಲ್ಲಿ ಬದ್ದರಾಗಿದ್ದೇವೆ ಎಂದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಮಾತನಾಡಿ, ಸಾಮಾಜಿಕ ನ್ಯಾಯ ವ್ಯವಸ್ಥಿತವಾಗಿದ್ದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ದೇಶದಲ್ಲಿ ಇಂದಿಗೂ ಸಾಮಾಜಿಕ ನ್ಯಾಯ ಎಂಬುದು ಮರಿಚೀಕೆಯಾಗಿದೆ. ಜಾತಿ ಪದ್ದತಿ, ಅಸ್ಪಶ್ಯತೆ, ಶೋಷಣೆ ಈಗಲೂ ಜೀವಂತವಾಗಿದೆ. ದೇಶದ ಸಂಪತ್ತು ಹಂಚಿಕೆ ಸರಿಯಾಗಿ ಆಗುತ್ತಿಲ್ಲ. ಪ್ರಜಾಪ್ರಭುತ್ವದ ಧೋರಣೆಯನ್ನು ಸರಿಯಾಗಿ ಅನುಷ್ಟಾನಗೊಳಿಸಿ ಶಿಕ್ಷಣ, ಕಾನೂನು ನೆರವಿನಿಂದ ಸಾಮಾಜಿಕ ನ್ಯಾಯ ಸಮಾನವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ಪಿ.ನಾಯಕ್ ಮಾತನಾಡಿ, ಎಲ್ಲ ಕ್ಷೇತ್ರ ಗಳಲ್ಲೂ ಸಾಮಾಜಿಕ ನ್ಯಾಯವನ್ನು ಭದ್ರಪಡಿಸಬೇಕು. ನ್ಯಾಯ ಎಂಬುದು ಸಮಾಜ ನೀಡುವ ಜವಾಬ್ದಾರಿಯುತ ಕೊಡುಗೆಯಾಗಿದೆ. ಸಮಾನತೆಯು ಆರ್ಥಿಕ, ಉದ್ಯೋಗ, ಶಿಕ್ಷಣ, ಹೆಣ್ಣು ಮಕ್ಕಳ ಅಭದ್ರತೆಯನ್ನು ಭದ್ರಪಡಿಸುವು ದಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲೆಡೆಯೂ ನಡೆಯುತ್ತಿರುವ ಭ್ರಷ್ಟಾಚಾರ ವನ್ನು ತಡೆಯುವ ಕೆಲಸ ಮನೆಯಿಂದ ಆರಂಭಗೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ವಹಿಸಿದ್ದರು. ಶೀತಲ್ ಸ್ನೇಹ ಶೆರಿಲ್ ಸ್ವಾಗತಿಸಿದರು. ಸುಚೇತ ಕಾರ್ಯಕ್ರಮ ನಿರೂಪಿಸಿದರು. ಶ್ರೀಲಕ್ಷ್ಮೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News