ರಸ್ತೆ ಸುರಕ್ಷಾ ಸಪ್ತಾಹ: ಗುಲಾಬಿ ನೀಡಿ ಆತ್ಮರಕ್ಷಣೆಯ ಎಚ್ಚರಿಕೆ

Update: 2019-02-20 12:04 GMT

ಶಿರ್ವ, ಫೆ. 20: ಉಡುಪಿ ಜಿಲ್ಲಾ ಪೊಲೀಸ್, ಕಾಪು ವೃತ್ತ, ಶಿರ್ವ ಪೊಲೀಸ್ ಠಾಣೆ, ಶಂಕರಪುರ ರೋಟರಿ ಕ್ಲಬ್, ಜೇಸಿಐ ಶಂಕರಪುರ, ಸೌತ್ ಕೆನರಾ ಫೋಟೋಗ್ರಾಪರ್ಸ್‌ ಅಸೋಸಿಯೇಶನ್ ಕಾಪು ವಲಯ, ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮತ್ತು ಟೆಂಪೊ ಮಾಲಕರ ಸಂಘ ಕಟಪಾಡಿ, ಗೂಡ್ಸ್ ಟೆಂಪೊ ಚಾಲಕರು ಮತ್ತು ಮಾಲಕರ ಸಂಘ ಶಂಕರಪುರ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ, ರೋಟರ್ಯಾಕ್ಟ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಫೆ.19ರಂದು ಶಂಕರಪುರ ಪೇಟೆಯಲ್ಲಿ ಆಯೋಜಿಸ ಲಾಗಿತ್ತು.

ಶಂಕರಪುರ ಧರ್ಮಕೇಂದ್ರದ ಹಿರಿಯ ಧರ್ಮಗುರು ರೆ.ಪಾ.ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ, ನಮಗೆ ಸ್ವಾಭಾವಿಕ ಮರಣ ಬರಬೇಕೇ ಹೊರತು ರಸ್ತೆ ಅಪಘಾತದಿಂದ ಅಲ್ಲ. ನಿಯಮಗಳಿರುವುದು ನಮ್ಮ ರಕ್ಷಣೆಗೆ. ಅದನ್ನು ಪಾಲಿಸುವುದು ನಮ್ಮ ಧರ್ಮ ಎಂದು ತಿಳಿಸಿದರು.

ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ, ಈಗ ಎಲ್ಲಾ ಮಾರಕ ರೋಗಗಳಿಗೂ ಔಷಧಿ ಕಂಡುಹಿಡಿಯಲಾಗಿದ್ದು, ಸಾವಿನ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆದರೆ ರಸ್ತೆ ಅಪಘಾತದಲ್ಲಿ ಪ್ರತೀ ವರ್ಷ ಲಕ್ಷಾಂತರ ಜನರು ಸಾಯುತ್ತಿರುವುದು ದುರಂತ ಎಂದರು.

ಉಗ್ರರ ದಾಳಿಗೆ ಹುತಾತ್ಮರಾದ ವೀರಯೋಧರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಎಸ್‌ಕೆಪಿಎ ಕಾಪು ವಲಯಾಧ್ಯಕ್ಷ ವೀರೇಂದ್ರ ಪೂಜಾರಿ, ದಿನೇಶ್ ಕುಲಾಲ್ ಶಂಕರಪುರ, ಸುಭಾಸ್‌ನಗರ ರೋಟರ್ಯಾಕ್ಟ್ ಅಧ್ಯಕ್ಷ ರಾಯನ್ ಫೆರ್ನಾಂಡಿಸ್, ಅಶೋಕ್ ಶೆಟ್ಟಿ ಸುಬಾಸ್‌ನಗರ, ಸುಧೀರ್ ಶೆಟ್ಟಿ ಶಂಕರಪುರ, ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೇಸಿಐ ಅಧ್ಯಕ್ಷ ಸಂದೀಪ್ ಬಂಗೇರಾ ಸ್ವಾಗತಿಸಿದರು. ಶಂಕರಪುರ ರೋಟರಿ ಅಧ್ಯಕ್ಷ ಚಂದ್ರ ಪೂಜಾರಿ ವಂದಿಸಿದರು. ಸಂತೋಷ್ ನಿರೂಪಿಸಿದರು. ನಂತರ ರಸ್ತೆಯಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಕಾರುಗಳಲ್ಲಿ ಸೀಟ್‌ಬೆಲ್ಟ್ ಧರಿಸದ ಚಾಲಕರಿಗೆ ಯಮಧರ್ಮ ಮತ್ತು ಚಿತ್ರಗುಪ್ತ ವೇಷಧಾರಿ ಗಳು ಕುತ್ತಿಗೆಗೆ ಪಾಶ ಹಾಕಿ, ಮುಂದೆ ಕಾನೂನು ಪಾಲಿಸಿ ಬದುಕಿಕೊಳ್ಳಿ ಎಂದು ಎಚ್ಚರಿಸಿದರು. ವಿವಿಧ ಸಂಘಟನೆಗಳ ಸದಸ್ಯರು, ಶಿರ್ವ ಪೊಲೀಸ್ ಸಿಬ್ಬಂದಿ ಗಳು ಪ್ರಯಾಣಿಕರಿಗೆ ಗುಲಾಬಿ ನೀಡಿ ಆತ್ಮರಕ್ಷಣೆಯ ಬಗ್ಗೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News