ತೆರವು ವೇಳೆ ಸಾಮಗ್ರಿಗಳಿಗೆ ಹಾನಿ: ಬೀದಿಬದಿ ವ್ಯಾಪಾರಿಗಳ ಪ್ರತಿರೋಧ

Update: 2019-02-20 12:10 GMT

ಮಂಗಳೂರು, ಫೆ.20: ನಗರದ ಸ್ಟೇಟ್‌ಬ್ಯಾಂಕ್, ಲೇಡಿಗೋಶನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ದಾಳಿ ಬುಧವಾರವೂ ಮುಂದುವರಿದಿದೆ. ಈ ಮಧ್ಯೆ ದಾಳಿಯ ನೆಪದಲ್ಲಿ ವ್ಯಾಪಾರಿಗಳ ಸಾಮಗ್ರಿಗಳನ್ನು ಹಾನಿಗೆಡಹುದರ ವಿರುದ್ಧ ಆಕ್ರೋಶಗೊಂಡ ವ್ಯಾಪಾರಿಗಳು ತೆರವು ಕಾರ್ಯಾಚರಣೆಗೆ ಬಂದ ವಾಹನದ ಮುಂದೆ ಮಲಗಿ ಪ್ರತಿರೋಧ ತೋರಿದ್ದಾರೆ.

ಪೊಲೀಸ್ ಆಯುಕ್ತರು ಪ್ರತೀ ಶುಕ್ರವಾರ ನಡೆಸುವ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಈ ಬಗ್ಗೆ ಹಲವು ಮಂದಿ ದೂರು ನೀಡಿದ ಹಿನ್ನಲೆಯಲ್ಲಿ ಮನಪಾ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮಂಗಳವಾರ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಬುಧವಾರವೂ ಇದೇ ರೀತಿಯ ಕಾರ್ಯಾಚರಣೆ ಆರಂಭಿಸಿದ ಮನಪಾ ಅಧಿಕಾರಿಗಳು ವ್ಯಾಪಾರಿಗಳ ಸರಕುಗಳಿಗೆ ಹಾನಿ ಎಸಗತೊಡಗಿದರು ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಅಧಿಕಾರಿಗಳು ಸರಕುಗಳಿಗೆ ಹಾನಿ ಎಸಗಿದ್ದಲ್ಲದೆ, ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡೊಯ್ಯಲು ಮುಂದಾದಾಗ ಆಕ್ರೋಶಗೊಂಡ ವ್ಯಾಪಾರಿಗಳು ವಾಹನಗಳ ಮುಂದೆ ಮಲಗಿ ಪ್ರತಿರೋಧ ತೋರಿದರು. ಅಲ್ಲದೆ ವಶಪಡಿಸಿಕೊಂಡ ಸೊತ್ತುಗಳನ್ನು ಮರಳಿಸಬೇಕು ಎಂದು ಆಗ್ರಹಿಸಿದರು. ವ್ಯಾಪಾರಿಗಳು ಪ್ರತಿಭಟನೆಗೆ ಇಳಿದಾಗ ಎಚ್ಚೆತ್ತ ಅಧಿಕಾರಿಗಳು ವಶಪಡಿಸಿಕೊಂಡು ಸೊತ್ತುಗಳನ್ನು ಮರಳಿಸಿದರು.

ಕಳೆದ 2 ವರ್ಷದಿಂದ ಟೌನ್ ವೆಂಡಿಂಗ್ ಕಮಿಟಿಯ ಸಭೆಯನ್ನು ಕರೆದಿಲ್ಲ, ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮುನ್ನ ಸೂಚನೆ ನೀಡಬೇಕು, ವಶಪಡಿಸಿಕೊಂಡ ಸೊತ್ತುಗಳನ್ನು ಮರಳಿಸಬೇಕು ಎಂಬ ನಿಯಮವಿದ್ದರೂ ಕೂಡ ಅದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಬಡವರ ಬಂಧು ಯೋಜನೆಯಡಿ ಅನೇಕ ಮಂದಿ ಬೀದಿಬದಿ ವ್ಯಾಪಾರಿಗಳು 10 ಸಾವಿರ ರೂ.ಸಾಲ ಪಡೆದು ವ್ಯಾಪಾರ ಆರಂಭಿಸಿದ್ದಾರೆ. ಒಂದೆಡೆ ಸಾಲ ಕೊಡುವ ಸರಕಾರ ಇನ್ನೊಂದೆಡೆ ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ ಮಾಡುತ್ತಿರು ವುದು ಖಂಡನೀಯ ಎಂದು ಇಮ್ತಿಯಾಝ್ ತಿಳಿಸಿದ್ದಾರೆ.

ಈ ಸಂದರ್ಭ ಸಿಐಟಿಯು ನೇತೃತ್ವದ ಮಂಗಳೂರು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಸ್ತಫಾ, ಹರೀಶ್ ಪೂಜಾರಿ, ಶ್ರೀಧರ್, ಆಸೀಫ್, ನೌಶಾದ್, ವಿಜಯ್, ಆದಂ, ಮುಝಫರ್, ಮುತ್ತುಸ್ವಾಮಿ, ಶಿವಪ್ಪ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News