ಉಡುಪಿ: ಫೆ. 24ರ ಉದ್ಯೋಗ ಮೇಳದಲ್ಲಿ 70ಕ್ಕೂ ಅಧಿಕ ಕಂಪೆನಿಗಳು

Update: 2019-02-20 14:03 GMT

ಉಡುಪಿ, ಫೆ.20: ರಾಷ್ಟ್ರೀಯ ವೃತ್ತಿ ಸೇವಾ (ಎನ್‌ಸಿಎಸ್) ಯೋಜನೆಯ ಡಿಯಲ್ಲಿ ಇದೇ ಫೆ.24ರ ರವಿವಾರ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಉದ್ಯೋಗ ಮೇಳ ‘ಭರವಸೆ’ಯಲ್ಲಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ 70ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ ಎಂದು ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಎಚ್‌ಪಿ, ವಿಪ್ರೋ, ಐಬಿಎಂ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಜಾ ಗ್ಲೋಬಲ್, ಇನ್‌ಫೋಸಿಸ್, ಮುತ್ತೂಟ್ ಫೈನಾನ್ಸ್ ಕಂಪೆನಿಗಳು ಭಾಗವಹಿಸುವುದನ್ನು ಈಗಾಗಲೇ ಖಚಿತ ಪಡಿಸಿವೆ ಎಂದರು.

ಈ ಸಂಸ್ಥೆಗಳು ನೀಡಿದ ಮಾಹಿತಿಗಳಂತೆ ಸುಮಾರು 2000ಕ್ಕೂ ಅಧಿಕ ಉದ್ಯೋಗಗಳು ಖಾಲಿ ಇದ್ದು, ಇದಕ್ಕಾಗಿ ಸ್ಥಳೀಯರನ್ನು ಆಯ್ಕೆ ಮಾಡಲು ಮುಂದಾಗಿವೆ. ಈಗಾಗಲೇ 2000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಇದರಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ ಎಂದರು.

ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಜಿಲ್ಲೆ ಹಾಗೂ ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಉದ್ಯೋಗ ಮೇಳ ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಉದ್ಯೋಗ ಮೇಳವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿದ್ದಾರೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸಂದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.  ವಿಧಾನ ಪರಿಷತ್‌ನ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ,ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರಬಾಬು ಮುಂತಾದವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಭಾಸ್ಕರ್ ಎ.ಅಮೀನ್ ಹಾಗೂ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News