‘ಕಂಬಳಬೆಟ್ಟು ಭಟ್ರೆನ ಮಗಳ್’ ಮಹಿಳಾ ಪ್ರದಾನ ಚಿತ್ರ ಫೆ.22ಕ್ಕೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಿಡುಗಡೆ

Update: 2019-02-20 14:23 GMT

ಉಡುಪಿ, ಫೆ.20: ತುಳು ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವ ‘ಕಂಬಳಬೆಟ್ಟು ಭಟ್ರೆನ ಮಗಳ್’ ಚಿತ್ರದ ತುಳು ಅವತರಣಿಕೆ ಇದೇ ಫೆ.22ರ ಶುಕ್ರವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಟಿಪ್ಲೆಕ್ಸ್ ಸೇರಿದಂತೆ ಸುಮಾರು 16 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ರೊಲಾಲ್ಡ್ ಮಾರ್ಟಿಸ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ಮಹಿಳಾ ಪ್ರದಾನ ಚಿತ್ರವಾಗಿದ್ದು, ಇದರ ಕನ್ನಡ ಅವತರಣಿಕೆ ಇನ್ನೆರಡು ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದರು.

ಶರತ್ ಎಸ್. ಪೂಜಾರಿ ಬಗ್ಗತೋಟ ಇದರ ನಿರ್ದೇಶಕರಾಗಿದ್ದು, ತುಳು ಚಿತ್ರರಂಗದ ಪ್ರಸಿದ್ಧ ಕಲಾವಿದರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ರಮೇಶ್ ರೈ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ ಎಂದರು. ಚಿತ್ರದಲ್ಲಿ ಮೂವರು ನಾಯಕರಿದ್ದು, ಪ್ರದೀಪ್ ಶೆಟ್ಟಿ, ಶರತ್ ಪೂಜಾರಿ ಹಾಗೂ ಶೈಲೇಶ್ ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಐಶ್ವರ್ಯ ಆಚಾರ್ಯ ಚಿತ್ರದ ನಾಯಕಿ.

ಚಿತ್ರದಲ್ಲಿ ಕೇರಳದ ಸಾಹಸ ಕ್ರೀಡೆ ಕಳಾರಿಪಯಟ್ಟುವನ್ನು ಅಳವಡಿಸಲಾಗಿದೆ. ಕರಾವಳಿ ಮಾತ್ರವಲ್ಲದೇ ಕೊಟ್ಟಿಗೆಹಾರ, ಸಕಲೇಶಪುರ, ಹಾಸನ, ಬೆಂಗಳೂರು ಹಾಗೂ ಮುಂಬಯಿಗಳಲ್ಲಿ ಚಿತ್ರೀಕರಣ ನಡೆದಿದೆ. ಎರಡೂವರೆ ಗಂಟೆ ಕಾಲಾವಧಿಯ ಇಂಪಾದ ಸಂಗೀತದ ವಿಭಿನ್ನ ಚಿತ್ರ ಇದಾಗಿದೆ ಎಂದು ಮಾರ್ಟಿಸ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಪ್ರಕಾಶ್ ಗಟ್ಟಿ, ಪ್ರದೀಪ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News