ಮೂವರು ಕಾಶ್ಮೀರಿ ಶಾಲು ವ್ಯಾಪಾರಿಗಳ ಮೇಲೆ ಹಲ್ಲೆ, ದರೋಡೆ

Update: 2019-02-20 14:48 GMT

ಹೊಸದಿಲ್ಲಿ, ಫೆ. 20: ದಿಲ್ಲಿಯಿಂದ ಹರ್ಯಾಣಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ಮೂವರು ಕಾಶ್ಮೀರಿ ಶಾಲು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಿಪಿಎಂ ಹೇಳಿದೆ.

ದಾಳಿಯಿಂದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾದ ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ದೇಶಾದ್ಯಂತ ಕಾಶ್ಮೀರಿಗಳ ಮೇಲೆ ದ್ವೇಷ ಹೆಚ್ಚುತ್ತಿದೆ.

ರೈಲು ದಿಲ್ಲಿಯಿಂದ 45 ಕಿ.ಮೀ. ದೂರದ ಸಾಂಪ್ಲಾ-ಬರೇಲಿ ಯಲ್ಲಿ ಸಂಚರಿಸುತ್ತಿದ್ದಾಗ ಶಸಸ್ತ್ರ ಪಡೆಯ ಯೋಧರು ಎಂದು ಹೇಳಿಕೊಂಡ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಶಾಲು ವ್ಯಾಪಾರಿಗಳು ತಿಳಿಸಿದ್ದಾರೆ ಎಂದು ಸಿಪಿಎಂ ಹೇಳಿದೆ.

ಆರಂಭದಲ್ಲಿ ಬೋಗಿಯಲ್ಲಿ ಇಬ್ಬರು ಮಾತ್ರ ಇದ್ದರು ಅವರು ನಮ್ಮನ್ನು ನೋಡುತ್ತಿದ್ದರು. ಪರಸ್ಪರ ಮಾತನಾಡುತ್ತಿದ್ದರು. ಅನಂತರ ಅವರು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ಕೊಳಕು ಕಾಶ್ಮೀರಿಗಳು ಎಂದು ಹೇಳಿದರು. ನಾವು ವಾಸ್ತವವನ್ನು ತಿಳಿಸಲು ಪ್ರಯತ್ನಿಸಿದೆವು. ಅವರು ನಾವು ಸೇನೆಯಲ್ಲಿ ಇರುವುದು ಎಂದು ಹೇಳಿದರು. ಕೊಲ್ಲುವುದಾಗಿ ಬೆದರಿಸಿದರು. ಮಾಗೋಲ್ಪುರಿ ದಾಟಿದ ಬಳಿಕ ಅವರು ನಮಗೆ ಥಳಿಸಲು ಆರಂಭಿಸಿದರು ಎಂದು ವ್ಯಾಪಾರಿಗಳು ಹೇಳಿರುವುದಾಗಿ ಪೋಸ್ಟ್ ತಿಳಿಸಿದೆ.

ಕೂಡಲೇ 15ರಿಂದ 20 ಮಂದಿ ಸಮೀಪದ ಬೋಗಿಯಿಂದ ಆಗಮಿಸಿದರು. ಅವರು ಕೂಡ ಕಾಶ್ಮೀರಿಗಳಿಗೆ ಥಳಿಸಿದರು. ‘‘ಅವರು ನಮಗೆ ಬೆಲ್ಟ್‌ನಿಂದ ಥಳಿಸಿದರು. ನಾವು ಬದುಕಿದ್ದೇವೆ ಎಂದು ನಂಬಲೇ ಸಾಧ್ಯವಾಗುತ್ತಿಲ್ಲ’’ ಎಂಬ ವ್ಯಾಪಾರಿಗಳ ಹೇಳಿಕೆಯನ್ನು ಸಿಪಿಎಂ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News