ಮಂಗಳೂರು: ಶಕ್ತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷಾ ಮಾರ್ಗದರ್ಶನ

Update: 2019-02-20 14:43 GMT

ಮಂಗಳೂರು, ಫೆ.20: ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿ ಕದ್ರಿ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ನಿರೀಕ್ಷಕ ಡೊಂಬಯ್ಯ, ಹೆಡ್ ಕನ್‌ಸ್ಟೇಬಲ್‌ಗಳಾದ ಸಂಜೀವ ಮತ್ತು ತಸ್ಲೀಮ್ ಆರಿಫ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಪೂರ್ಣ ಮಾಹಿತಿ ನೀಡಿದರು.

ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರಿಂದ ಹಾಗೂ ವಾಹನನಿಬಿಡ ರಸ್ತೆಗಳಲ್ಲಿ ಸಂಚರಿಸುವಾಗ ಪ್ರತಿಯೊಬ್ಬ ವಾಹನ ಸವಾರನೂ ಅತೀ ಎಚ್ಚರದಿಂದ ವಾಹನ ಚಲಾಯಿಸಬೇಕು. ಯಾವುದೇ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು, ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಸವಾರರು ಮಾತ್ರವಲ್ಲ ಪಾದಚಾರಿಗಳ ಜೀವಕ್ಕೆ ಕೂಡ ಕುತ್ತು ತಂದೊಡ್ಡುತ್ತದೆ ಎಂದು ಅವರು ಹೇಳಿದರು. 18 ವರ್ಷ ವಯೋಮಾನ ದಾಟದವರು ಎಂದೂ ವಾಹನ ಚಲಾಯಿಸುವ ಹುಚ್ಚಿಗೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳು ಸಂಚಾರ ನಿಯಮಗಳ ಕುರಿತಾಗಿ ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು. ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಶಕ್ತಿ ವಸತಿ ಶಾಲೆಯ ಪ್ರಾಚಾರ್ಯ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮಾಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News