ಮಂಗಳೂರು ವಿವಿಯಲ್ಲಿ `ಕೆಡ್ಡಸ ಪರ್ಬ' ಕಾರ್ಯಕ್ರಮ

Update: 2019-02-20 14:48 GMT

ಕೊಣಾಜೆ, ಫೆ. 20: ಕೆಡ್ಡಸ ಆಚರಣೆಯು ತುಳುನಾಡು ಮಾತ್ರವಲ್ಲ ಉತ್ತರಕನ್ನಡ, ಕೇರಳ, ಅಸ್ಸಾಂ, ಬಂಗಾಲದಲ್ಲಿಯೂ ಇದ್ದು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಪ್ರಮುಖವಾಗಿ ಇಂದಿನ ಯುವ ಜನಾಂಗಕ್ಕೆ ಇಂತಹ ಆಚರಣೆಗಳ ಮಹತ್ವದ ಬಗ್ಗೆ ತಿಳಿಸುವ ಕಾರ್ಯ ಆಗಬೇಕು ಎಂದು  ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಹೇಳಿದರು.

ಅವರು ಮಂಗಳೂರು ವಿವಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯ ಹಾಗೂ ಸ್ನಾತಕೋತ್ತರ ತುಳು ಅಧ್ಯಯನ ವಿಭಾಗ, ವಿಶ್ವವಿದ್ಯಾಲಯ ಸಂದ್ಯಾ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ `ಕೆಡ್ಡಸ ಪರ್ಬ' ಕಾರ್ಯಕ್ರಮದಲ್ಲಿ `ತುಳು ಸಂಸ್ಕøತಿ ಮತ್ತು ಕೆಡ್ಡಸ' ವಿಷಯದಲ್ಲಿ ಉಪನ್ಯಾಸ ನೀಡಿದರು.

ತುಳುನಾಡಿನ ಸಂಸ್ಕೃತಿ ಅರ್ಥಪೂರ್ಣ ಸಂಸ್ಕೃತಿಯಾಗಿದೆ. ಕೆಡ್ಡಸದಂತಹ ತುಳುವರ ಆಚರಣೆಗಳು ಮೂಡನಂಬಿಕೆಯಲ್ಲ, ಅದು ತುಳುವರ ಬದುಕಾಗಿದೆ. ಇಂದು ಬ್ರಹ್ಮಕಲಶದಂತಹ ಹೊಸ ಹೊಸ ಆಚರಣೆಗಳು ಬಂದು ತುಳುನಾಡಿನ ಮೂಲ ಆಚರಣೆಗಳು ಮರೆಯಾಗುತ್ತಿವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು, ಮಂಗಳೂರು ವಿವಿಯ ಎಲ್ಲ ಅಧ್ಯಯನ ಕೇಂದ್ರಗಳು ಆಯಾ ವ್ಯಾಪ್ತಿಗೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತುಳುನಾಡಿನ ಆಚರಣೆ, ಮಹತ್ವದ ಬಗ್ಗೆ ಹೆಚ್ಚೆಚ್ಚು ಸಂಶೋಧನೆಗಳು ನಡೆದು ಅದರ ಪ್ರಯೋಜನಗಳು ಮುಂದಿನ ಪೀಳಿಗೆಗೆ ಸಿಗುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ.ಶಿವರಾಮ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಉದಯ ಬಾರ್ಕೂರು ಅವರು ಸ್ವಾಗತಿಸಿ, ಡಾ.ರಾಮಕೃಷ್ಣ ಬಿ.ಎಂ. ಅವರು ವಂದಿಸಿದರು. ವಿದ್ಯಾರ್ಥಿನಿ ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಕೆಡ್ಡಸ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಪುರಸ್ಕಾರ ನೀಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News