ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಜೀವದ ಹಂಗು ತೊರೆದು ರಕ್ಷಿಸಿದ ಯುವಕ

Update: 2019-02-20 15:33 GMT

ಭಟ್ಕಳ, ಫೆ. 20: ಇಲ್ಲಿನ ಡೋಂಗರ್ ಪಳ್ಳಿಯ ಬಳಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಬಾವಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯ ಯುವಕರು ತಮ್ಮ ಜೀವದ ಹಂಗು ತೊರೆದು ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.

ಅಪರ್ಣಾ ನಾಗರಾಜ್ ಶೇಠ್ (39) ಎಂಬ ಮಹಿಳೆ ಇಂದು ಮಧ್ಯಾಹ್ನ ಮುಸ್ಲಿಮ್ ಬಹುಳ್ಯ ಪ್ರದೇಶದಲ್ಲಿರುವ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕಟ್ಟಡ ಕಾರ್ಮಿಕರು ಇದನ್ನು ಗಮನಿಸಿ ಅಕ್ಕಪಕ್ಕದಲ್ಲಿರುವ ಯುವಕರನ್ನು ಕೂಗಿ ಕರೆದಿದ್ದಾರೆ. ಕ್ಷಣಾರ್ಧದಲ್ಲೆ ಮಗ್ದೂಮ್ ಕಾಲನಿ, ಡೋಂಗರ್ ಪಳ್ಳಿ, ಸೋನಾರ್‍ಕೇರಿ, ಆಸಾರಕೇರಿಯ ಯುವಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಆದರೆ ಆಳ ಬಾವಿಯಲ್ಲಿ ಇಳಿದು ಮಹಿಳೆಯನ್ನು ರಕ್ಷಿಸುವುದು ಅಸಾಧ್ಯವೆಂದನಿಸಿ ಬಹಳಷ್ಟು ಯುವಕರು ಹಿಂದೆ ಸರಿದರು. ಆದರೆ ಇಬ್ರಾಹೀಂ ಬಾವಲ ಎಂಬವರು ತಾನು ಮಹಿಳೆಯನ್ನು ರಕ್ಷಿಸುತ್ತೇನೆ ಎಂದು ಪೊಲೀಸರ ಅನುಮತಿಯೊಂದಿಗೆ ಆಳ ಬಾವಿಗೆ ಇಳಿದು ಮಹಿಳೆಯನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಮಹಿಳೆಯನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

"ಹಿಂದೂ ಮಹಿಳೆಯೊಬ್ಬರು ಮುಸ್ಲಿಮ್ ಬಹುಳ್ಯ ಪ್ರದೇಶದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೆ ಆದಲ್ಲಿ ಭಟ್ಕಳದಲ್ಲಿ ಕೋಮುವಾದಿ ಸಂಘಟನೆಗಳು ಇದನ್ನೆ ಕೋಮುಗಲಭೆಗೆ ಬಳಸಿಕೊಳ್ಳುವ ಸಾಧ್ಯತೆಗಳಿದ್ದು, ದೇವರದಯೆಯಿಂದ ಆ ಮಹಿಳೆಯನ್ನು ಮುಸ್ಲಿಮ್ ಯುವಕರು ಬದುಕಿಸಿದ್ದಾರೆ" ಎಂದು ಸ್ಥಳೀಯ ಹಿರಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News