‘ಸೊರಕೆ ಬಗ್ಗೆ ಮುಸ್ಲಿಂ ಸಂಘಟನೆ ಒಕ್ಕೂಟದ ತಪ್ಪುಗ್ರಹಿಕೆ’

Update: 2019-02-20 15:34 GMT

ಉಡುಪಿ, ಫೆ.20: ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಲ್ಪಸಂಖ್ಯಾತ ವಿರೋಧಿ ಎಂಬ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಆಶ್ರಫ್‌ ಅವರ ಹೇಳಿಕೆ ಸಂಪೂರ್ಣ ತಪ್ಪುಕಲ್ಪನೆ ಮತ್ತು ಪೂರ್ವಾಗ್ರಹ ಪೀಡಿತ ವಾದುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಟೀಕಿಸಿದ್ದಾರೆ.

ಎಲ್ಲಾ ವರ್ಗಗಳನ್ನು ಸಮಾನವಾಗಿ ಕಾಣುವ ಸೊರಕೆ, ಚುನಾವಣೆಗಳಲ್ಲಿ ಮುಸ್ಲಿಂ ಮತ್ತು ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದರು ಎನ್ನುವುದು ಆಧಾರ ರಹಿತ ಆರೋಪವಾಗಿದೆ. ಈ ಹಿಂದೆ ಅವರು ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಕೂಡಾ ಮುಸ್ಲಿಂ ಹಾಗೂ ಅಲ್ಪಸಂಖ್ಯಾತ ವರ್ಗದವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಸೊರಕೆ ಪಕ್ಷದಲ್ಲಿ ಅವಕಾಶವಿದ್ದ ಸಂದರ್ಭದಲ್ಲ್ಲಿ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ಪ್ರತಿನಿಧಿ ಗಳಿಗೆ ಅವಕಾಶವನ್ನು ಕೊಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದನ್ನು ನಾವು ಸ್ವತಃ ಕಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಇತರರು ಮತ ನೀಡೋದಿಲ್ಲ ಎಂಬ ಹೇಳಿಕೆಯನ್ನು ಸೊರಕೆ ಎಂದೂ ನೀಡಿಲ್ಲ. ಇದು ಜಿಪಂ ಚುನಾವಣಾ ಸಂದರ್ಭದಲ್ಲಿ ವಿರೋಧಿಗಳು ಮಾಡಿದ ಅಪಪ್ರಚಾರ. ಈ ಅಪಪ್ರಚಾರದ ಹೇಳಿಕೆಗೆ ಸೊರಕೆಯವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೊರಕೆಯವರು ಈಗಾಗಲೇ ಪುತ್ತೂರಿನ ಶಾಸಕರಾಗಿ, ಉಡುಪಿ ಸಂಸದ ರಾಗಿ, ಕಾಪು ಶಾಸಕರಾಗಿ ಆಯ್ಕೆಯಾಗಿರುವುದು ಎಲ್ಲಾ ವರ್ಗಗಳ ಬೆಂಬಲ ದಿಂದ. ಹೀಗಾಗಿ ಮುಸ್ಲಿಂ ಮತ್ತು ಅಲ್ಪಸಂಖ್ಯಾತರು ಸೊರಕೆಯವರಿಗೆ ಸದಾ ಬೆಂಬಲವಾಗಿ ನಿಂತಿದ್ದಾರೆ ಎನ್ನುವುದು ಸ್ಪಷ್ಟ ಎಂದು ಅವರು ತಿಳಿಸಿದ್ದಾರೆ.

ಜನರಲ್ಲಿ ಸದಾ ಗೊಂದಲ ಮೂಡಿಸುವುದು ಕಿಡಿಗೇಡಿಗಳ ಮತ್ತು ವಿರೋಧಿಗಳ ಹಿಡನ್ ಅಜೆಂಡಾ. ಈ ಹೇಳಿಕೆ ಆ ಅಜೆಂಡದ ಭಾಗವಾಗಿದೆ. ಸ್ಪಷ್ಟವಾದ ಜಾತ್ಯಾತೀತ ನಿಲುವನ್ನು ಹೊಂದಿರುವ ಸೊರಕೆಯವರ ಬಗ್ಗೆ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ಸಮುದಾಯದ ಯಾರೂ ತಪ್ಪು ಅಭಿಪ್ರಾಯಕ್ಕೆ ಬರಬಾರದು ಮತ್ತು ಪೂರ್ವಾಗ್ರಹ ಪೀಡಿತರ ಈ ಹುನ್ನಾರವನ್ನು ಖಂಡಿಸ ಬೇಕಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಹಬೀಬ್ ಅಲಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ. ಇಬ್ರಾಹಿಂ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಿಯಾಝ್ ಪಳ್ಳಿ ಪತ್ರಿಕಾ ಹೇಳಿಕೆಯಲ್ಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News