ಉಡುಪಿ: ಜಿಲ್ಲೆಯಲ್ಲಿ ಮತ್ತೆ ಮೂರು ಮಂಗಗಳ ಸಾವು

Update: 2019-02-20 16:52 GMT
ಮಂಗನಕಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮ

ಉಡುಪಿ, ಫೆ.20: ಜಿಲ್ಲೆಯಲ್ಲಿ ಇಂದು ಇನ್ನೂ ಮೂರು ಸತ್ತ ಮಂಗಗಳು ಪತ್ತೆಯಾಗಿವೆ. ಇವುಗಳಲ್ಲಿ ಒಂದರ ಅಟಾಪ್ಸಿ ನಡೆಸಲಾಗಿದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಶಂಕರನಾರಾಯಣ ಪಿಎಚ್‌ಸಿ ವ್ಯಾಪ್ತಿಯ ಅಂಪಾರು, ಸಿದ್ಧಾಪುರದ ಹೊಸಂಗಡಿ ಹಾಗೂ ಉಡುಪಿ ತಾಲೂಕು ಕರ್ಜೆಗಳಲ್ಲಿ ಇಂದು ಸತ್ತ ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ ಶಂಕರನಾರಾಯಣದ ಅಂಪಾರಿನಲ್ಲಿ ಸಿಕ್ಕಿದ ಮಂಗನ ದೇಹದ ಪೋಸ್ಟ್ ಮಾರ್ಟಂ ನಡೆಸಿ ವಿಸೇರಾವನ್ನು ಶಿವಮೊಗ್ಗ ಮತ್ತು ಮಣಿಪಾಲದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ರಕ್ತ ಪರೀಕ್ಷೆ ನಡೆಸಿದ 41 ಮಂದಿಯಲ್ಲಿ ಯಾರಲ್ಲೂ ಮಂಗನಕಾಯಿಲೆಯ ಸೋಂಕು ಪತ್ತೆಯಾಗಿಲ್ಲ. ಇಂದು ಯಾರನ್ನೂ ಸಹ ಪರೀಕ್ಷೆಗೊಳಪಡಿಸಿಲ್ಲ ಎಂದು ಡಾ.ಭಟ್ ನುಡಿದರು.

ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದ ಪಿಎಚ್‌ಸಿ ವ್ಯಾಪ್ತಿಯಲ್ಲಿ ಇಂದೂ ಜ್ವರದಿಂದ ಬಾಧಿತರಾದವರಿಗಾಗಿ ಮನೆ ಮನೆ ಸರ್ವೆ ಮುಂದುವರಿ ದಿದೆ. ಇಂದು ಜಿಲ್ಲೆಯ 79 ಗ್ರಾಮಗಳಲ್ಲಿ ಈ ಸರ್ವೆ ಕಾರ್ಯ ನಡೆದಿದ್ದು, ದಿನದಲ್ಲಿ ಒಟ್ಟು 3144 ಮನೆಗಳಿಗೆ ಭೇಟಿ ನೀಡಿ ಜ್ವರ ಬಾಧಿತರ ಮಾಹಿತಿ ಕಲೆ ಹಾಕಲಾಗಿದೆ.

ಇದುವರೆಗೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಒಟ್ಟು 95,498 ಮನೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಕಲೆಹಾಕಿದ್ದಲ್ಲದೇ, ಮಂಗನಕಾಯಿಲೆ ಕುರಿತು ಜಾಗೃತಿಯನ್ನು ಮೂಡಿಸಿದ್ದಾರೆ.

ಕಾಡೂರಿನ ಗ್ರಾಮ ಪಂಚಾಯತ್‌ನಲ್ಲಿ ಇಂದು ಕೆಎಫ್‌ಡಿ ಕುರಿತಂತೆ ವಿಶೇಷ ಗ್ರಾಮ ಸಭೆ ನಡೆಯಿತು. ಶಾಲೆಗಳಲ್ಲೂ ಮಂಗನಕಾಯಿಲೆ ಕುರಿತು ಮಕ್ಕಳಿಗೆ ಮಾಹಿತಿಗಳನ್ನು ನೀಡಲಾಯಿತು. ಕಾರ್ಕಳ ತಾಲೂಕಿನ ಕುಕ್ಕಂದೂರಿನ ಎಸ್‌ಟಿ ಕಾಲನಿಯಲ್ಲಿ ಗ್ರಾಮಸ್ಥರಿಗೆ ಮಂಗನಕಾಯಿಲೆ ಕುರಿತು ಮಾಹಿತಿ ನೀಡಲಾಯಿತಲ್ಲದೇ, ಮುಂಜಾಗ್ರತಾ ಕ್ರಮವಾಗಿ ಬಳಸಲು ಡಿಎಂಪಿ ತೈಲಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News