ತೃತೀಯಲಿಂಗಿ ಅರ್ಚಕಿಯ ತಲೆ ಕಡಿದ ದುಷ್ಕರ್ಮಿಗಳು: ಇಬ್ಬರ ಬಂಧನ

Update: 2019-02-20 16:56 GMT

ಚೆನ್ನೈ, ಫೆ.20: ದೇವಸ್ಥಾನವೊಂದರ ಅರ್ಚಕಿಯಾಗಿದ್ದ ತೃತೀಯ ಲಿಂಗಿ ಮಹಿಳೆಯ ತಲೆಯನ್ನು ದೇವಸ್ಥಾನದ ಆವರಣದೊಳಗೇ ಕತ್ತರಿಸಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ತೂತುಕುಡಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಮರುಥು ಹಾಗೂ ಆತನ ಸ್ನೇಹಿತ ಸ್ನೊವಿನ್ ಬಂಧಿತ ಆರೋಪಿಗಳು.

ಫೆ.14ರಂದು 38 ವರ್ಷದ ತೃತೀಯ ಲಿಂಗಿ ಮಹಿಳೆ ರಜತಿ ಎಂಬಾಕೆ ತೂತುಕುಡಿ ಜಿಲ್ಲೆಯ ತೆರಾಸ್‌ಪುರಂನಲ್ಲಿರುವ ದೇವಸ್ಥಾನದಲ್ಲಿ ಪೂಜಾ ಕಾರ್ಯದಲ್ಲಿ ನಿರತರಾಗಿದ್ದಾಗ ದೇವಸ್ಥಾನದೊಳಗೆ ನುಗ್ಗಿದ್ದ ಇಬ್ಬರು ರಜತಿಯ ತಲೆಯನ್ನು ಕುಡುಗೋಲಿನಿಂದ ಕತ್ತರಿಸಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಬಳಿಕ ಶಿರವನ್ನು ದೇವಸ್ಥಾನದ ಹೊರಗಡೆಯಿಟ್ಟು , ಛಿದ್ರಗೊಂಡಿದ್ದ ದೇಹವನ್ನು ದೇವಸ್ಥಾನದ ಒಳಗಡೆಯೇ ಬಿಟ್ಟು ಪರಾರಿಯಾಗಿದ್ದರು. ಸೋಮವಾರ ಮರುಥು ನ್ಯಾಯಾಲಯದಲ್ಲಿ ಶರಣಾದರೆ ಸ್ನೊವಿನ್‌ನನ್ನು ಮಂಗಳವಾರ ಬಂಧಿಸಲಾಗಿತ್ತು. ರಜತಿಯ ಜತೆ ತನಗೆ ಅನೈತಿಕ ಸಂಬಂಧವಿತ್ತು ಎಂದು ಮರುಥು ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತನ್ನೊಡನೆ ಸಂಬಂಧ ಇರಿಸಿಕೊಂಡಿದ್ದ ಮರುಥುಗೆ ದೇವಸ್ಥಾನದ ಹೊರಗಡೆ ಒಂದು ಸಣ್ಣ ಅಂಗಡಿ ತೆರೆಯಲು ರಜತಿ ಆರ್ಥಿಕ ಸಹಾಯ ಮಾಡಿದ್ದಳು. ಈ ಮಧ್ಯೆ ಮರುಥು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದು ಇದು ತಿಳಿಯುತ್ತಿದ್ದಂತೆಯೇ ಆತನಿಗೆ ನೀಡುತ್ತಿದ್ದ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಿದ್ದ ರಜತಿ, ದೇವಸ್ಥಾನದ ಒಳಗೆ ಕಾಲಿರಿಸದಂತೆ ಮರಥುಗೆ ಎಚ್ಚರಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಮರುಥು ಮತ್ತು ಆತನ ಕುಟುಂಬದವರು ರಜತಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲೆಯಲ್ಲಿರುವ ತೃತೀಯ ಲಿಂಗಿಗಳು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News